Breaking Newsಉತ್ತರ ಕನ್ನಡಜಿಲ್ಲಾ ಸುದ್ದಿ

ಮೀನುಗಾರರ ಸಮಸ್ಯೆಗಳ ಕುರಿತು ವಿಧಾನಸಭೆಯಲ್ಲಿ ಧ್ವನಿ ಎತ್ತಲಿದ್ದೇನೆ: ಡಿಕೆ ಶಿವಕುಮಾರ್

ಕಾರವಾರ : ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡಿಕೊಂಡಿದ್ದೇನೆ. ಪರಿಹಾರಕ್ಕೆ ವಿಧಾನಸೌಧದಲ್ಲಿ ಧ್ವನಿ ಎತ್ತಲಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದರು.

ಶಿರಸಿ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಬ್ಬ ಮೀನುಗಾರ 10 ಜನರಿಗೆ ಉದ್ಯೋಗ ಸೃಷ್ಠಿ ಮಾಡುತ್ತಾನೆ. ಮೀನು ಹಿಡಿಯುವವರು, ಸಾಗಾಟ ಮಾಡುವವರು, ಮಾರುವವರು, ಬೋಟ್ ಕಟ್ಟುವವರ ಜೀವನವೂ ಮೀನನ್ನೇ ಆಶ್ರಯಿಸಿದೆ. ಕಳೆದ ಎರಡು ದಿನಗಳಿಂದ ಮಂಗಳೂರಿನಿಂದ ಆರಂಭಿಸಿ ಸಂಪೂರ್ಣ ಕರಾವಳಿಯ ಸಮಸ್ಯೆ ಆಲಿಸಿದ್ದೇನೆ. ಈ ವರ್ಗವನ್ನು ನಿರ್ಲಕ್ಷ್ಯ ಮಾಡಲಾಗಿದೆ. ಅವರ ಸಮಸ್ಯೆ ಬಗೆಹರಿಸುವ ಕಾರ್ಯ ನಮ್ಮಿಂದ ಆಗಲಿದೆ ಎಂದರು.

ಹೊನ್ನಾವರ ಬಂದರು ನಿರ್ಮಾಣದಿಂದ ಮೀನುಗಾರರಿಗೆ ಸಮಸ್ಯೆ ಆಗಲಿದೆ. ಬಂದರನ್ನು ಬೇರೆಲ್ಲಾದರೂ ನಿರ್ಮಿಸಿಕೊಳ್ಳಲಿ. ನಾವು ಜನರ ಪರ ನಿಂತು ಜನರ ಧ್ವನಿ ಎತ್ತುತ್ತೇವೆ ಎಂದು ತಿಳಿಸಿದರು.

ಮೇಕೆ ದಾಟು ಯೋಜನೆಯಲ್ಲಿ ರಾಜ್ಯ ಸರ್ಕಾರ ತನ್ನ ಸ್ವಾಭಿಮಾನವನ್ನು ಎಂದಿಗೂ ಕಳೆದುಕೊಳ್ಳಬಾರದು. ಮುಖ್ಯವಾಗಿ ಬಿ.ಎಸ್.ಯಡಿಯೂರಪ್ಪ ತಮಿಳುನಾಡು ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇ ತಪ್ಪು. ಮಹಾದಾಯಿ ಅಥವಾ ಕಾವೇರಿ ನೀರು ಹಂಚಿಕೆಯಲ್ಲಿ ರಾಜ್ಯದ ರೈತರ ಹಿತ ಕಡೆಗಣಿಸಬಾರದು ಎಂದರು.

ಮುಖ್ಯಮಂತ್ರಿಗೆ ಫೋನ್ :

ಕಾರ್ಯಕರ್ತರ ಸಭೆಯನ್ನು ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಿದ್ದೆವು.ಆದರೆ ಸಹಾಯಕ ಆಯುಕ್ತೆ ಈ ಸಭೆಗೆ ಆಸ್ಪದ ನೀಡದೇ ಕಲ್ಯಾಣ ಮಂಟಪಕ್ಕೆ ಬೀಗ ಹಾಕಿಸಿದ್ದಾರೆ. ನಾವು ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕರೆ ಮಾಡಿ “ನಮ್ಮ ವಿರುದ್ದ ಬೇಕಿದ್ದರೆ ಪ್ರಕರಣ ದಾಖಲಿಸಿಕೊಳ್ಳಿ. ಆದರೆ ಜನರ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ” ಎಂದು ಎಚ್ಚರಿಸಿದ್ದೇನೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಆರ್.ವಿ.ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಇತರರಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button