ಡಿ ಕೆ ಶಿವಕುಮಾರ್ ಚತುರ ರಾಜಕಾರಣಿ, ಸಂಘಟನಾ ಚತುರ: ಎಂಎಲ್ಸಿ ಹೆಚ್ ವಿಶ್ವನಾಥ್

ಮೈಸೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಣದ ಮಧ್ಯೆ ಮುಂದಿನ ಮುಖ್ಯಮಂತ್ರಿ ಕುರಿತು ಗುಂಪುಗಾರಿಕೆ ಆರಂಭವಾಗಿರುವ ಹೊತ್ತಲ್ಲೇ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅವರು ಡಿ ಕೆ ಶಿವಕುಮಾರ್ ಪರ ಬ್ಯಾಟ್ ಬೀಸಿದ್ದಾರೆ.
ಡಿ.ಕೆ.ಶಿವಕುಮಾರ್ ಚತುರ ರಾಜಕಾರಣಿ. ಸಂಘಟನಾ ಚತುರ. ಕಾಂಗ್ರೆಸ್ ತ್ಯಜಿಸಿದವರನ್ನು ಅವರು ಮರಳಿ ಪಕ್ಷಕ್ಕೆ ಆಹ್ವಾನಿಸುತ್ತಿರುವುದು ಅವರ ಸೌಜನ್ಯತೆಯನ್ನು ತೋರುತ್ತದೆ. ಪಕ್ಷ ಸಂಘಟಿಸುವ ನಾಯಕರಾದವರು ಹೀಗಿರುತ್ತಾರೆ. ಪಕ್ಷ ಬಿಟ್ಟು ಹೋಗಿರುವವರು ಕಾಂಗ್ರೆಸ್ಗೆ ವಾಪಸ್ ಬರಬಾರದೆಂದರೆ ಸಿದ್ದರಾಮಯ್ಯ ಈ ಹಿಂದೆ ಕಾಂಗ್ರೆಸ್ ಸೇರುವಾಗ ಎಲ್ಲ ಹಿರಿಯ ಕಾಂಗ್ರೆಸ್ ನಾಯಕರು ಹೀಗೆ ಹೇಳಿದ್ದರೆ? ಎಂದು ಪತ್ರಿಕಾಗೋಷ್ಠಿಯಲ್ಲಿ ಹೆಚ್ ವಿಶ್ವನಾಥ್ ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ದ್ವೇಷದ ರಾಜಕಾರಣ ಬಿಡಬೇಕು. ಪಕ್ಷ ಬಿಡುವುದು, ಸೇರುವುದು ಹೊಸದಲ್ಲ. ಶಿವಕುಮಾರ್ ಕರೆದಾಕ್ಷಣ ಯಾರೂ ಕಾಂಗ್ರೆಸ್ ಸೇರುವುದಿಲ್ಲ. ಆದರೆ, ಅವರ ಸೌಜನ್ಯ ಮೆಚ್ಚುವಂಥದ್ದು ಎಂದರು.
ಸಿದ್ದರಾಮಯ್ಯ ಅವರನ್ನು ಜೆಡಿಎಸ್ನಿಂದ ಉಚ್ಚಾಟಿಸಿದಾಗ ಆಗ ಕಾಂಗ್ರೆಸ್ಸಿನ ಎಲ್ಲನಾಯಕರು ಸಿದ್ದರಾಮಯ್ಯ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಆಗ ಯಾರಾದರೂ ಸಿದ್ದರಾಮಯ್ಯ ಕಾಂಗ್ರೆಸ್ಸಿಗೆ ಬಂದರೆ ಪ್ರಳಯ ಆಗುತ್ತದೆ ಎಂದು ಹೇಳಿದರಾ? ಡಿ.ಕೆ.ಶಿವಕುಮಾರ್ ಅವರ ಸೌಜನ್ಯ ಸಿದ್ದರಾಮಯ್ಯ ಅವರಿಗೂ ಬರಬೇಕು ಎಂದು ತಿಳಿಸಿದರು.
ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಕೂಡಲೇ ರದ್ದುಪಡಿಸಬೇಕು :
ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಎರಡೇ ದಿನ ಬರೆಯಬೇಕು ಎಂದು ಸರಕಾರ ಹೇಳಿದೆ. ಇದರಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹಾಗೂ ದಲಿತ ಮಕ್ಕಳಿಗೆ ತೊಂದರೆಯಾಗುತ್ತದೆ. ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಕೂಡಲೇ ರದ್ದುಪಡಿಸಬೇಕು . ರಾಜ್ಯದಲ್ಲಿ ಯಾವ ಮಂತ್ರಿ ಏನು ಕೆಲಸ ಮಾಡುತ್ತಿದ್ದಾರೆ ಎಂಬುದೇ ಮುಖ್ಯಮಂತ್ರಿಗಳಿಗೆ ತಿಳಿಯುತ್ತಿಲ್ಲ. ಶಕ್ತಿಪೀಠ ಮಸುಕಾಗಿದೆ ಎಂದು ವಿಶ್ವನಾಥ್ ಟೀಕಿಸಿದರು.
