Breaking Newsಉತ್ತರ ಕನ್ನಡಜಿಲ್ಲಾ ಸುದ್ದಿ

ಸಿದ್ದರಾಮಯ್ಯ, ಡಿಕೆಶಿ ನಡುವೆ ಬಿರುಕಿದೆ ಎನ್ನುವುದು ಮಾಧ್ಯಮ ಸೃಷ್ಟಿ: ಆರ್.ವಿ.ದೇಶಪಾಂಡೆ

ಕಾರವಾರ : ರಾಜ್ಯ ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಕುರಿತು ಚರ್ಚಿಸುವುದು ಸರಿಯಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ಮುಂದೆಯೂ ಒಗ್ಗಟ್ಟಾಗಿ ಹೋಗಬೇಕು ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ಶಿರಸಿಯಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆ ಸಂಬಂಧ ಪ್ರಮುಖರ ಸಭೆ ನಡೆಸಿ ನಂತರ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಕುರಿತು ಊಹಾಪೋಹ ಸೃಷ್ಟಿಸುವ ಕಾರ್ಯ ಸರಿಯಲ್ಲ. ಈ ಕುರಿತು ನಾಯಕರ ನಡುವೆಯೂ ಹೆಚ್ಚಿನ ಚರ್ಚೆಯ ಅಗತ್ಯವಿಲ್ಲ ಎಂದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಯಾರು ಮುಖ್ಯಮಂತ್ರಿ ಆಗಬೇಕು ಎಂಬ ಚರ್ಚೆಯೇ ಈಗ ಅಪ್ರಸ್ತುತ.ಈ ಕುರಿತು ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಯೇ ಇಲ್ಲ.ಮೊದಲು ಚುನಾವಣೆ ನಡೆಯಬೇಕು, ಕಾಂಗ್ರೆಸ್ ಬಹುಮತ ಬರಬೇಕು, ನಂತರ ಮುಖ್ಯಮಂತ್ರಿ ಸ್ಥಾನದ ಚರ್ಚೆ ಆಗಬೇಕು.ಆದರೆ ಕೆಲವರು ಈ ಕುರಿತು ಸ್ವಂತ ಅಭಿಪ್ರಾಯ ನೀಡಿದ್ದು, ಅದು ಸಹ ಪಕ್ಷದ ಚೌಕಟ್ಟಿನಲ್ಲಿಯೇ ಇರಬೇಕು ಎಂದು ತಿಳಿಸಿದರು.

ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಿಯೇ ಹೋಗುತ್ತಿದ್ದಾರೆ. ಅವರ ನಡುವೆ ಬಿರುಕಿದೆ ಎನ್ನುವುದು ಕೆಲ ಮಾಧ್ಯಮಗಳ ಸೃಷ್ಟಿ ಎಂದು ಅವರು ಪ್ರತಿಕ್ರಿಯಿಸಿದರು.

ನಾನು ಯಾವತ್ತೂ ಮಂತ್ರಿ ಮಾಡಿ ಎಂದು ಹೇಳಿಲ್ಲ. ಅದೇ ರೀತಿ ಮುಖ್ಯಮಂತ್ರಿ ಅಭ್ಯರ್ಥಿ ವಿಚಾರದಲ್ಲಿಯೂ ಕೂಡ ಈಗಿಂದ ಚರ್ಚೆ ಮಾಡುವುದು ಸರಿಯಲ್ಲ. ಚುನಾವಣೆಗೆ ಇನ್ನೂ ಎರಡು ವರ್ಷಗಳಿದ್ದು, ಅಧಿಕಾರಕ್ಕೆ ಬಂದ ನಂತರ ಎಲ್ಲವೂ ನಿರ್ಧಾರ ಆಗಲಿದೆ ಎಂದರು.

ಕಾಂಗ್ರೆಸ್ ನಿಯಮಾವಳಿಯಂತೆ ಕೆಲ ಜಿಲ್ಲೆಗಳ ಅಧ್ಯಕ್ಷರ ಸ್ಥಾನ ಬದಲಾವಣೆ ಮಾಡಲು ರಾಜ್ಯಾಧ್ಯಕ್ಷರು ನಿರ್ಣಯಿಸಿದ್ದಾರೆ. ಈ ಬಗ್ಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದ ದೇಶಪಾಂಡೆ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸ್ವತಃ ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ ಎಂದು ಹೇಳಿಕೆ ನೀಡುವುದು ಹಾಸ್ಯಾಸ್ಪದ. ಸ್ಥಿರ ಸರ್ಕಾರವಿದ್ದಾಗ ಇಂಥ ಹೇಳಿಕೆ ನೀಡುವುದು ಆಡಳಿತದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಭಾವನೆ ಮೂಡಿಸುತ್ತದೆ. ಕಾಂಗ್ರೆಸ್ ಸರ್ಕಾರವಿದ್ದಾಗ ಮಂಜೂರಾದ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಇದೀಗ ಸರಿಯಾಗಿ ಅನುದಾನ ಬಿಡುಗಡೆ ಆಗುತ್ತಿಲ್ಲ.ಇವೆಲ್ಲವನ್ನೂ ಗಮನಿಸಿದರೆ ಆಡಳಿ ವೈಫಲ್ಯ ಎದ್ದು ಕಾಣುತ್ತದೆ ಎಂದು ಟೀಕಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ಜುಲೈ 2ರಿಂದ ಜಿಲ್ಲೆಯಲ್ಲಿ ಕೊರೋನಾ ಸಂಕಷ್ಟಕ್ಕೆ ಒಳಗಾದವರ ಮನೆ ಮನೆಗೆ ತೆರಳಿ,ಸರ್ಕಾರದಿಂದ ಸಿಗಬೇಕಾದ ಸೌಲಭ್ಯ ಒದಗಿಸಿಕೊಡಲು ಶ್ರಮಿಸುವುದು,ಕೊರೋನಾ ೩ನೇ ಅಲೆಯೆಡೆಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುವುದು. ಜತೆಯಲ್ಲಿ, ಪಕ್ಷ ಸಂಘಟನೆಗೂ ಆದ್ಯತೆ ನೀಡಲಾಗುವುದು. ಇಡೀ ತಿಂಗಳು ಈ ಕಾರ್ಯ ಮಾಡಿ ಹೈಕಮಾಂಡ್‌ಗೆ ವರದಿ ನೀಡಲಾಗುವುದು ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button