Latestರಾಜಕೀಯ

ನಾಯಕತ್ವ: ಆಂತರಿಕ ಬೇಗುದಿಯಲ್ಲಿ ಕಾಂಗ್ರೆಸ್

ಜಿ ಮುಮ್ತಾಜ್ ಅಲೀಂ

ಆಡಳಿತಾರೂಢ ಬಿಜೆಪಿಯ ಆಡಳಿತ ವೈಫಲ್ಯ ಹಾಗೂ ಆಂತರೀಕ ಬೇಗುದಿಯ ಲಾಭ ಪಡೆದು ಅಧಿಕಾರದ ಗಾದಿಗೇರುವ ಕನಸು ಕಾಣುತ್ತಿರುವ ಪ್ರದೇಶ ಕಾಂಗ್ರೆಸ್, ನಾಯಕತ್ವಕ್ಕೆ ಸಂಬಂಧಿಸಿದಂತೆ ಸ್ವತಃ ಆಂತರಿಕ ಬೇಗುದಿಗೆ ಬಿದ್ದಿದೆ.

ರಾಜ್ಯದಲ್ಲಿ ಪಕ್ಷದ ಘಟಾನುಘಟಿ ನಾಯಕರೇ ತೆರೆಯ ಮರೆಯಲ್ಲಿ ಇದರ ಸೂತ್ರಧಾರರಾಗಿದ್ದಾರೆ ಎನ್ನುವುದು ಗುಟ್ಟಿನ ವಿಚಾರವೇನಲ್ಲ.

ಹಾಗೆ ನೋಡಿದರೆ, ರಾಜಕೀಯ ಕಾರಣಗಳಿಂದಾಗಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ನಡುವೆ ಭಿನ್ನಾಭಿಪ್ರಾಯಗಳಿರುವುದನ್ನೂ ಯಾರೂ ಅಲ್ಲಗೆಳೆಯುವಂತಿಲ್ಲ.

ಈ ಇಬ್ಬರು ಘಟಾನುಘಟಿಗಳ ನಡುವೆ ನಡೆಯುತ್ತಿರುವ ಶೀತಲ ಸಮರವೇ ರಾಜ್ಯದಲ್ಲಿ ಪಕ್ಷದೊಳಗಿನ ಗದ್ದಲ ಗೊಂದಲಗಳಿಗೆ ಕಾರಣ ಎಂದರೆ ತಪ್ಪೇನಿಲ್ಲ. ಇದರ ಪರಿಣಾಮವಾಗಿಯೇ ಅವರ ದಾರಿಯನ್ನು ಇವರು, ಇವರ ದಾರಿಯನ್ನು ಅವರು ಮುಚ್ಚಬೇಕು ಎಂದು ತೆರೆಮರೆಯಲ್ಲಿ ಜಿದ್ದಿಗೆ ಬಿದ್ದವರಂತೆ ಹಗ್ಗಜಗ್ಗಾಟದಲ್ಲಿ ತೊಡಗಿರುವುದು ಗೋಚರವಾಗತೊಡಗಿದೆ.

ಅಸಲಿಗೆ ಆಗಿದ್ದೇನೆಂದರೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಮ್ಮ ಪಕ್ಷ ಸಂಘಟನೆ ಹಾಗೂ ರಾಜಕೀಯ ಚಾಣಾಕ್ಷತೆ ಜತೆಗೆ ತಮ್ಮ ಇಮೇಜ್ ಬಿಲ್ಡಪ್​ಗೆ ಪ್ರಚಾರ ತಂತ್ರಕ್ಕೆ ಮೊರೆ ಹೋದರು.

ಇದರ ಅಂಗವಾಗಿ ದೆಹಲಿ ಮೂಲದ ಡಿಸೈನ್ ಬಾಕ್ಸ್ ಹೆಸರಿನ ಪ್ರಚಾರ ಸಂಸ್ಧೆಯೊಂದನ್ನು ಬೆಂಗಳೂರಿಗೆ ಕರೆಸಿಕೊಂಡರು. ಈ ಸಂಸ್ಥೆ ಬೆಂಗಳೂರಿನ ಪಂಚತಾರಾ ಹೋಟೆಲ್‍ವೊಂದರಲ್ಲಿ ಕುಳಿತು ಡಿಕೆಶಿ ಪರವಾಗಿ ಪ್ರಚಾರ ತಂತ್ರ ಹೆಣೆಯಿತು.

ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ಸುದ್ದಿ ಮಾಧ್ಯಮಗಳನ್ನು ಬಳಸಿಕೊಂಡು ಸಕ್ರಿಯವಾಗಿ ಕೆಲಸ ಮಾಡತೊಡಗಿತು. ಪರಿಣಾಮವಾಗಿ ಡಿ.ಕೆ.ಶಿವಕುಮಾರ್ ಅವರೇ ನಮ್ಮ ಮುಂದಿನ ಮುಖ್ಯಮಂತ್ರಿ ಮತ್ತಿತರ ವಿಷಯಗಳು ರಾಜ್ಯ ಹಾಗೂ ದೆಹಲಿ ಮಟ್ಟದ ಮಾಧ್ಯಮಗಳಲ್ಲಿ ಪ್ರತಿಬಿಂಬಿತವಾಗತೊಡಗಿದವು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯರನ್ನು ತೆರೆಯ ಮರೆಗೆ ಸರಿಸುವ ಪ್ರಯತ್ನ ಇದರ ಹಿಂದಿದೆ ಎಂದು ಸಿದ್ದು ಮತ್ತು ಬೆಂಬಲಿಗರಿಗೆ ಯಾವಾಗ ಗೋಚರವಾಗತೊಡಗಿತೋ ಎಚ್ಚೆತ್ತ ಸಿದ್ದರಾಮಯ್ಯ ಮತ್ತು ಟೀಮ್ ಸಹಜವಾಗಿಯೇ ಇದಕ್ಕೆ ಪ್ರತಿತಂತ್ರ ಹೂಡಲು ಮುಂದಾಯಿತು.

ಹೀಗೆ ಬಿಟ್ಟರೆ ಇನ್ನೆರಡು ವರ್ಷದಲ್ಲಿ ಅಂದರೆ ಮುಂಬರುವ ವಿಧಾನಸಭೆ ಚುನಾವಣೆ ವೇಳೆಗೆ ಸಿದ್ದರಾಮಯ್ಯ ವರ್ಚಸ್ಸು ಮಸುಕಾಗಬಹುದು ಎಂಬ ದಿಗಿಲು ಇದಕ್ಕೆ ಕಾರಣವಾಗಿತ್ತು. ಹೀಗಾಗಿ ಡಿಕೆಶಿ ಪ್ರಚಾರತಂತ್ರಕ್ಕೆ ವಿರುದ್ಧವಾಗಿ ಹಾಗೂ ಸಿದ್ದರಾಮಯ್ಯ ಪರವಾಗಿ ಶಾಸಕ ಜಮೀರ್ ಅಹಮ್ಮದ್ ಅಖಾಡಕ್ಕೆ ಇಳಿದು ಸಿದ್ದರಾಮಯ್ಯ ಅವರೇ ಮತ್ತೆ ಮುಂದಿನ ಮುಖ್ಯಮಂತ್ರಿ ಎಂದು ಗಟ್ಟಿದನಿಯಲ್ಲಿ ಹೇಳಗೊಡಗಿದರು.

ವಾಸ್ತವವಾಗಿ ಡಿಕೆಶಿ ಮತ್ತು ಸಿದ್ದರಾಮಯ್ಯ ಜಾತಿ, ಓಟ್ ಬ್ಯಾಂಕ್ ಮತ್ತಿತರ ಕಾರಣಗಳಿಗಾಗಿ ಪರಸ್ಪರ ಅವಲಂಬಿತರು. ಇಲ್ಲಿ ಡಿಕೆಶಿ ಸಮಸ್ಯೆ ಏನೆಂದರೆ ಅವರು ಸಂಘಟನಾ ಚತುರ ನಿಜ. ಆದರೆ ಸಿದ್ದರಾಮಯ್ಯರನ್ನು ಹೋಲಿಸಿದರೆ ಅವರ ಬೆನ್ನಿಗೆ ಅಗಾಧ ಪ್ರಮಾಣದ ಓಟ್ ಬ್ಯಾಂಕ್ ಇಲ್ಲ. ಇದಕ್ಕೆ ವಿರುದ್ಧವಾಗಿ ಸಿದ್ದರಾಮಯ್ಯ ಮಾಸ್ ಲೀಡರ್ ಎಂಬುದರಲ್ಲಿ ಎರಡು ಮಾತಿಲ್ಲ.

ಒಕ್ಕಲಿಗ ಸಮುದಾಯದ ಓಟ್ ಬ್ಯಾಂಕ್ ಪೈಕಿ ಜೆಡಿಎಸ್ ಸೇರಿದಂತೆ ಬಿಜೆಪಿಯಲ್ಲಿ ಇರುವ ಒಕ್ಕಲಿಗ ನಾಯಕರು ಒಂದಷ್ಟು ಓಟುಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರೆ ಶಿವಕುಮಾರ್ ಅವರಿಗೆ ಎಷ್ಟು ದಕ್ಕುತ್ತದೆ ಎಂಬುದು ಯಕ್ಷ ಪ್ರಶ್ನೆ ಅಲ್ಲ.

ಇದರ ಸ್ಪಷ್ಟ ಅರಿವು ಇರುವ ಡಿಕೆಶಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದು, ಮುಂದಿನ ಮುಖ್ಯಮಂತ್ರಿ ತಾನೇ ಎಂಬ ಸಂದೇಶವನ್ನು ರವಾನಿಸುವ ಪ್ರಯತ್ನಕ್ಕೆ ಕೈಹಾಕಿದರು. ಇದರಿಂದ ಒಕ್ಕಲಿಗ ಜಾತಿ ಮತ್ತು ಓಟ್ ಬ್ಯಾಂಕ್ ತನ್ನ ಕಡೆ ಹೆಚ್ಚಿನ ಪ್ರಮಾಣದಲ್ಲಿ ವಾಲಬಹುದು ಎಂಬ ಗಣಿತಕ್ಕೆ ಮೊರೆ ಹೋಗಿರಲೂ ಬಹುದು.

ಇದರ ಜತೆಗೆ ಮುಸ್ಲಿಮರು, ದಲಿತರು, ಹಿಂದುಳಿದವರು ಮತ್ತಿತರ ತನ್ನಿಂದ ತಾನೆ ಬರುವಂತಹ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮತಬ್ಯಾಂಕ್‍ಗಳನ್ನು ಬಳಸಿಕೊಂಡು ತಾವು ಮುಂದಿನ ಮುಖ್ಯಮಂತ್ರಿ ಆಗಬಹುದು ಎಂಬ ಲೆಕ್ಕಾಚಾರವೂ ಇದರ ಹಿಂದೆ ಇತ್ತು.

ಆದರೆ ಸಿದ್ದರಾಮಯ್ಯ ಮತ್ತು ಟೀಮ್ ಇದನ್ನೆಲ್ಲಾ ನೋಡಿಕೊಂಡು ಸುಮ್ಮನೆ ಕೂರುವ ಜಾಯಮಾನದವರಲ್ಲ. ಈ ಹಿಂದೆ ಡಾ.ಜಿ.ಪರಮೇಶ್ವರ್ ಮತ್ತಿತರನ್ನೇ ಸುಮ್ಮನಾಗಿಸಿ ಐದು ವರ್ಷ ಯಶಸ್ವಿ ರಾಜ್ಯಭಾರ ಮಾಡಿದ ನಿಷ್ಣಾತ ಸಿದ್ದರಾಮಯ್ಯ. ಈಗ ತನ್ನ ರಾಜಕೀಯ ವಿರೋಧಿಯನ್ನು ಬಗ್ಗುಬಡಿಯುವುದು ಹೇಗೆ ಎಂಬುದು ಹೆಚ್.ಡಿ.ದೇವೇಗೌಡ ಗರಡಿಯಲ್ಲಿ ಪಳಗಿರುವ ಸಿದ್ದರಾಮಯ್ಯಗೆ ಗೊತ್ತಿಲ್ಲದ ವಿಚಾರವೇನಲ್ಲ.

ಗಮನಿಸಬೇಕಾದ್ದು ಏನೆಂದರೆ, ಈ ರಾಜಕೀಯ ಹಗ್ಗಜಗ್ಗಾಟದಲ್ಲಿ ಯಾವುದೂ ಕೂಡ ಅತಿಯಾದರೆ ಪಕ್ಷವೇ ಒಡೆದು ಹೋಳಾಗುವ ಅಪಾಯಗಳಿರುತ್ತವೆ.

ಹಾಗೇನಾದರೂ ಆದರೆ ಅದರ ಪರಿಣಾಮ ಏನಾಗುತ್ತದೆ. ಇಂತಹದ್ದೊಂದು ಸುಸಂದರ್ಭಕ್ಕಾಗಿ ಜೆಡಿಎಸ್ ಕಾದು ಕುಳಿತಿರುತ್ತದೆ. ಅದೃಷ್ಟವಶಾತ್ ಬಿಜೆಪಿಗೆ ಒಂದಷ್ಟು ಹೆಚ್ಚಿನ ಸ್ಥಾನ ದಕ್ಕಿದರೆ ಮುಂದಿನ ಚುನಾವಣೆಯಲ್ಲಿ ಅಧಿಕಾರ ತಾನಾಗಿಯೇ ತನಗೆ ಒಲಿದು ಬರಬಹುದು ಎಂಬ ಲೆಕ್ಕಾಚಾರದಲ್ಲಿರುವ ಕಾಂಗ್ರೆಸ್ಸಿಗೆ ಭ್ರಮನಿರಸನ ಆಗುವುದರಲ್ಲಿ ಸಂಶಯವಿಲ್ಲ. ಸಮ್ಮಿಶ್ರ ಸರ್ಕಾರದ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಮುಂಚೂಣಿ ನಾಯಕರು ಸಾವಧಾನವಾಗಿಯೇ ಮುನ್ನಡೆಯುವ ವಿವೇಕವನ್ನು ಪ್ರದರ್ಶಿಸುವುದು ಅನಿವಾರ್ಯವಾಗಿದೆ.

ಯುವ ಕಾಂಗ್ರೆಸ್ ಗದ್ದಲ

ಇನ್ನು ಕಾಂಗ್ರೆಸ್ ಪಕ್ಷದ ನಾಯಕತ್ವದ ಗೊಂದಲ ಕೇವಲ ಮುಂಚೂಣಿ ನಾಯಕರಿಗಷ್ಟೇ ಸೀಮಿತವಾಗಿಲ್ಲ. ರಾಜ್ಯ ಯುವ ಕಾಂಗ್ರೆಸ್​ನಲ್ಲೂ ಅದು ದೊಡ್ಡಮಟ್ಟದಲ್ಲಿ ಸದ್ದು ಮಾಡಿದೆ.

ಈ ವಿಷಯದಲ್ಲೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ರಾಜಕೀಯ ನೆರಳು ಕೆಲಸ ಮಾಡಿದೆ. ಆದರೆ ಈಗ ಈ ಇಬ್ಬರು ನಾಯಕರು ತಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಜಾರಿಕೊಳ್ಳುವ ಜಾಣ ಮೌನ ಪ್ರದಶಿಸುತ್ತಿದ್ದಾರೆ.

ವಾಸ್ತವವಾಗಿ ಕಳೆದ ಫೆಬ್ರವರಿಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಅತ್ಯಧಿಕ ಮತಗಳನ್ನು ಪಡೆದು ಗೆಲ್ಲುವ ಮೂಲಕ ತಮ್ಮ ಸಾಮಥ್ರ್ಯ ಹಾಗೂ ಸಂಘಟನಾ ಚತುರತೆಯನ್ನು ಸಾಬೀತುಪಡಿಸಿದರು.

ಆದರೆ, ಕೈಗೆ ಬಂದ ತುತ್ತು ಅವರಿಗೆ ಬಾಯಿಗೆ ಬರಲಿಲ್ಲ. ಅವರ ಮೇಲಿದ್ದ ಪೊಲೀಸ್ ಮೊಕದ್ದಮೆಗಳು ಅದಕ್ಕೆ ಕಾರಣ. 2008ರಲ್ಲಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಇಚ್ಚೆಯಂತೆ ಎನ್‍ಎಸ್‍ಯುಐ ಮತ್ತು ಯುವ ಕಾಂಗ್ರೆಸ್ ಎರಡರಲ್ಲೂ ಅಪರಾಧಿಕ ಹಿನ್ನೆಲೆಯುಳ್ಳ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಪಕ್ಷದ ಸಂವಿಧಾನಕ್ಕೆ ತಿದ್ದುಪಡಿ ತರಲಾಯಿತು.

ಆದಾಗ್ಯೂ ಮೊಹಮ್ಮದ್ ನಲಪಾಡ್ ಚುನಾವಣೆಗೆ ಸ್ಪರ್ಧಿಸಿ ತಮ್ಮ ಪ್ರತಿಸ್ಪರ್ಧಿ ಮಾಜಿ ಸಚಿವ ಎಂ.ಆರ್.ಸೀತಾರಾಮ್ ಪುತ್ರ ರಕ್ಷಾರಾಮಯ್ಯ ಅವರಿಗಿಂತ ಹೆಚ್ಚಿನ ಮತ ಪಡೆದು ಅಂದರೆ ಏಳು ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು.

ಆದರೆ ನಲಪಾಡ್ ವಿರುದ್ದ ಕ್ರಿಮಿನಲ್ ಪ್ರಕರಣಗಳಿದ್ದ ಪರಿಣಾಮವಾಗಿ ಪಕ್ಷದ ಚುನಾವಣಾ ಸಮಿತಿ ನಲಪಾಡ್ ರನ್ನು ಅನರ್ಹಗೊಳಿಸಿ ರಕ್ಷಾ ರಾಮಯ್ಯ ಅವರನ್ನು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರನ್ನಾಗಿಸಿತು.

ಆದರೆ ಈ ವಿಷಯ ತೀವ್ರ ವಿವಾದಕ್ಕೆಡೆಯಾಗಿ ರಾಹುಲ್ ಗಾಂಧಿ ಸೇರಿದಂತೆ ದೆಹಲಿ ಮಟ್ಟದವರಿಗೂ ದೂರು ಹೋಯಿತು. ಸಮಸ್ಯೆ ಪರಿಹರಿಸುವಂತೆ ದೆಹಲಿ ನಾಯಕರು ರಾಜ್ಯ ನಾಯಕರಿಗೆ ಸೂಚಿಸಿದ್ದರೂ ಈವರೆಗೂ ವಿಷಯ ಇತ್ಯರ್ಥವಾಗಿಲ್ಲ.

ಈ ನಡುವೆ ಮೊಹಮ್ಮದ್ ನಲಪಾಡ್ ಅವರ ಬೆನ್ನಿಗೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕೃಪಾಕಟಾಕ್ಷವಿದೆ. ಹಾಗೆಯೇ ರಕ್ಷಾ ರಾಮಯ್ಯ ಅವರಿಗೆ ಸಿದ್ದರಾಮಯ್ಯ ಅವರ ಪರೋಕ್ಷ ಬೆಂಬಲವಿದೆ ಎಂದು ಹೇಳಲಾಗುತ್ತಿದೆ.

ಮುಸ್ಲಿಮರಲ್ಲಿ ಈಗ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿರುವ ಸಲೀಮ್ ಅಹಮದ್ ತರದ ಸೌಮ್ಯ ಸ್ವಭಾವದ ನಾಯಕನಿದ್ದರೆ ಸಮಸ್ಯೆ ಇಲ್ಲ. ಆದರೆ. ರಾಂಗ್ ಬ್ಯಾಕ್ ಗ್ರೌಂಡ್ ಇರುವಂತಹ ಮೊಹಮ್ಮದ್ ನಲಪಾಡ್ ಅವರನ್ನು ಡಿಕೆಶಿ ನೇರವಾಗಿ ಅಲ್ಲದಿದ್ದರೂ ಪರೋಕ್ಷ ಬೆಂಬಲಕ್ಕೆ ನಿಂತಿರುವುದು ಸರಿಯಲ್ಲ ಎನ್ನುವ ಮಾತುಗಳು ಪಕ್ಷದೊಳಗಿನಿಂದಲೇ ಕೇಳಿ ಬರತೊಡಗಿವೆ.

ಮೇಲ್ನೋಟಕ್ಕೆ ಮೊಹಮ್ಮದ್ ನಲಪಾಡ್ ಅವರಿಗೆ ಅನ್ಯಾಯವಾಗಿದೆ ಎನ್ನುವುದು ನಿಜ. ಆದರೆ, ಪಕ್ಷದ ನೀತಿ-ನಿಯಮಕ್ಕನುಗುಣವಾಗಿ ಚುನಾವಣೆಯಲ್ಲಿ ತಾನು ಗೆದ್ದರೂ ಅನರ್ಹಗೊಳ್ಳುತ್ತೇನೆ ಎಂದು ಗೊತ್ತಿದ್ದರೂ ನಲಪಾಡ್ ಚುನಾವಣೆಗೆ ಸ್ಪರ್ಧಿಸಿದ್ದು, ಅದಕ್ಕೆ ಪಕ್ಷದ ಚುನಾವಣಾ ಸಮಿತಿ ಅವಕಾಶ ನೀಡಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಈಗ ಸಹಜವಾಗಿಯೇ ಮೂಡಿದೆ.

ವಿಷಯ ಇಂತಿರುವಾಗ ಡಿಕೆಶಿ ಅವರು ನಲಪಾಡ್ ಬೆಂಬಲಕ್ಕೆ ನಿಂತರೆ ತಾನು ಬೆಳೆದು ಬಂದ ಹಿನ್ನೆಲೆಯುಳ್ಳವರನ್ನೇ ಪ್ರೋತ್ಸಾಹ ನೀಡುತ್ತಿದ್ದಾರೆ ಎಂಬ ಸಂದೇಶ ರವಾನೆಯಾದಂತಾಗಿದೆ.

ಹೀಗಾಗಿ ತಮ್ಮ ನಿರ್ಧಾರದಿಂದ ಅವರು ಹಿಂದೆ ಸರಿದರೆ ಒಳಿತು ಎಂಬ ಅಭಿಪ್ರಾಯಗಳಿವೆ. ಜತೆಗೆ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದು ಇಡೀ ಜಂಜಾಟದಿಂದ ದೂರ ಉಳಿಯುವಂತೆಯೂ ಇಲ್ಲ. ನೇರವಾಗಿ ನಲಪಾಡ್ ಬೆನ್ನು ತಟ್ಟಿದರೆ ರಕ್ಷಾ ರಾಮಯ್ಯ ಪಠಾಲಂ ಜತೆಗೆ ತೆರೆಮರೆಯಲ್ಲೇ ಅವರನ್ನು ರಕ್ಷಿಸುತ್ತಿರುವ ಸಿದ್ದು ಮತ್ತು ಟೀಮ್ ಗುರ್ ಎನ್ನುತ್ತದೆ.

ಈ ಧರ್ಮಸಂಕಟದಿಂದ ಪಾರಾಗಲು ನಳಪಾಡ್ ಮತ್ತು ರಕ್ಷಾರಾಮಯ್ಯ ನಡುವೆ ಸಂಧಾನ ಏರ್ಪಡಿಸುವುದು, ಇಲ್ಲವೇ ಕಾಲಹರಣ ಇಲ್ಲವಾದರೆ ಚೆಂಡನ್ನು ದಿಲ್ಲಿ ಅಂಗಳಕ್ಕೆ ರವಾನೆ ಈ ಸೂತ್ರಕ್ಕೆ ಡಿಕೆಶಿ ಮತ್ತು ಸಿದ್ದು ಮೊರೆ ಹೋದಂತಿದೆ.

ಈ ನಡುವೆ ಮುಂದಿನ ಡಿಸೆಂಬರ್ ವರೆಗೆ ರಕ್ಷಾ ರಾಮಯ್ಯ ನಂತರ ಮೊಹಮ್ಮದ್ ನಳಪಾಡ್ ಗೆ ಸ್ಥಾನ ಹಂಚಿಕೆ ಸೂತ್ರ ಹೆಣೆಯಲಾಗಿದೆಯಂತೆ. ಆದರೆ ಇದನ್ನು ಬಹಿರಂಗವಾಗಿ ದೃಢೀಕರಿಸಲು ಡಿಕೆಶಿ ಮತ್ತು ಸಿದ್ದು ಉಭಯತ್ರರು ಹಿಂದೇಟು ಹಾಕಿದ್ದು ಮೌನಕ್ಕೆ ಶರಣಾಗಿದ್ದಾರೆ.

ಜತೆಗೆ ತನ್ನ ಸಂಘಟನಾ ಚತುರತೆ, ಸಾಮರ್ಥ್ಯದ ಮೂಲಕ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ತನ್ನ ನೈತಿಕ ಜಯ ಸಾಧಿಸಿರುವ ನಳಪಾಡ್ ತನ್ನನ್ನು ತಾನು ತಿದ್ದಿಕೊಂಡು ಬದಲಾಗುವ ಮೂಲಕ ಅಂದರೆ ತನ್ನ ಮೈಗೆ ಅಂಟಿರುವ ಕಳಂಕದಿಂದ ಪಾರಾಗುವ ಅಗತ್ಯವಿದೆ. ಆ ಮೂಲಕ ಸಜ್ಜನ ಸಹವಾಸ ಬೆಳೆಸಿಕೊಂಡು ಪ್ರಬುದ್ದನಾಗಿ ಬೆಳೆಯುವ ಮೂಲಕ ರಾಜಕೀಯದಲ್ಲಿ ಉಜ್ವಲ ಭವಿಷ್ಯ ಕಂಡುಕೊಳ್ಳಬೇಕಿದೆ.

Spread the love

Related Articles

Leave a Reply

Your email address will not be published. Required fields are marked *

Back to top button