ಕಾಶ್ಮೀರದ ಮಚಲ್ ಪ್ರದೇಶದ ಜನರಿಗೆ ತುರ್ತು ವೈದ್ಯಕೀಯ ನೆರವು: ಉಚಿತವಾಗಿ 10ಲಕ್ಷ ಮೌಲ್ಯದ ವೈದ್ಯಕೀಯ ಸಲಕರಣೆ ರವಾನೆ

ಆಶ್ರಯ ಹಸ್ತ ಟ್ರಸ್ಟ್ ಜಯನಗರ ವತಿಯಿಂದ ಭಾರತದ ಗಡಿ ಪ್ರದೇಶವಾದ ಕಾಶ್ಮೀರದ ಸಮೀಪವಿರುವ ಮಚಲ್ ಪ್ರದೇಶಕ್ಕೆ 10 ಲಕ್ಷ ರೂಪಾಯಿ ಮೌಲ್ಯದ ಉಚಿತ ವೈದ್ಯಕೀಯ ಸಲಕರಣೆಗಳಾದ ಆಕ್ಸಿಜನ್ ಕಾನ್ಸೆಂಟ್ರೇಟರ್, ಡಿಜಿಟಲ್ ಸ್ಟೆತಾಸ್ಕೋಪ್, ಆಮ್ಲಜನಕ ಸಿಲಿಂಡರ್ ಗಳನ್ನು ಇಂದು ಬೆಂಗಳೂರಿನಿಂದ ವಿಮಾನಯಾನದ ಮೂಲಕ ತಲುಪಿಸುವ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇನ್ಫೋಸಿಸ್ ಸಹ ಸಂಸ್ಥಾಪಕರಾದ ಕೆ.ದಿನೇಶ್ ರವರು ಧ್ವಜ ತೋರುವ ಮೂಲಕ ಸೇವಾ ಕಾರ್ಯಕ್ರಮವನ್ನ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಪುನೀತ್ ಮತ್ತು ಮಯೂರ್ ರವರು ಉಪಸ್ಥಿತರಿದ್ದರು.
ಕೋವಿಡ್-19 ಸಾಂಕ್ರಮಿಕ ರೋಗದ ಕಾರಣದಿಂದ ಸತತ ಎರಡು ವರ್ಷದಿಂದ ಲಾಕ್ ಡೌನ್ ಆಗಿ ಜನ ಸಾಮಾನ್ಯರು ಸಂಕಷ್ಟದಲ್ಲಿರುವಾಗ ಆಶ್ರಯ ಹಸ್ತ ಟ್ರಸ್ಟ್ ವತಿಯಿಂದ ಉಚಿತವಾಗಿ ಊಟದ ಪ್ಯಾಕೇಟ್ ಮತ್ತು ದಿನಸಿ ಕಿಟ್ ವಿತರಿಸಲಾಗಿತ್ತು. ಹೀಗಾಗಿ ಸಾರ್ವಜನಿಕರಿಗೆ ಇದೇ ವೇಳೆ ಕೊರೊನಾ ಜನಜಾಗೃತಿ ಅಭಿಯಾನ ಕೈಗೊಳ್ಳಲಾಗಿತ್ತು.

ಮಾಸ್ಕ್, ಸ್ಯಾನಿಟೈಸರ್ ಮತ್ತು ಕೊರೊನಾ ಸೋಂಕಿತರಿಗೆ ವೈದ್ಯಕೀಯ ಸಹಾಯ, ಆಸ್ಪತ್ರೆಗೆ ದಾಖಲಿಸಲು ಆಶ್ರಯ ಹಸ್ತ ಟ್ರಸ್ಟ್ ಹಗಲಿರುಳು ಶ್ರಮಿಸಿತ್ತು. ಇದೀಗ ಭಾರತದ ತುತ್ತ ತುದಿಯಲ್ಲಿರುವ ಕಾಶ್ಮೀರದ ಗಡಿ ಭಾಗದಲ್ಲಿ ಸತತ ಗುಂಡಿನ ಸುರಿಮಳೆಯಾಗುತ್ತಿದೆ. ಅಲ್ಲಿ ಆಸ್ಪತ್ರೆಗೆ ತೆರಳಬೇಕು ಅಂದ್ರೆ ಕನಿಷ್ಟ ನಾಲ್ಕು ಕಿಲೋ ಮೀಟರ್ ಸಾಗಬೇಕು. ಹೀಗಾಗಿ ಮಚಲ್ ಪ್ರದೇಶದ ಮಕ್ಕಳು, ಹಿರಿಯರು ಮತ್ತು ಗರ್ಭಿಣಿ ಮಹಿಳೆಯರು ಆನಾರೋಗ್ಯ ಪೀಡಿತರಾಗಿ ತುರ್ತು ವೈದ್ಯಕೀಯ ಸೌಲಭ್ಯ ಸಿಗದೆ ಪರಿತಪಿಸುವಂತಾಗಿದೆ. ಈ ನಿಟ್ಟಿನಲ್ಲಿ ಅವರಿಗೆ ಅನೂಕೂಲವಾಗಲೆಂದು ಉಚಿತವಾಗಿ ವೈದ್ಯಕೀಯ ಸಲಕರಣೆಗಳನ್ನು ತಲುಪಿಸಲಾಗುತ್ತಿದೆ ಎಂದು ತಿಳಿಸಿದರು.
