
ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಟೂರ್ನಿಯಲ್ಲಿ ಅತ್ಯಂತ ಕಳಪೆ ಆರಂಭವನ್ನು ಪಡೆದಿದೆ. ಟೂರ್ನಿಯಲ್ಲಿ ಈವರೆಗೆ ನಾಲ್ಕು ಪಂದ್ಯಗಳನ್ನು ಆಡಿದ್ದು ಈ ಎಲ್ಲಾ ನಾಲ್ಕು ಪಂದ್ಯಗಳಲ್ಲಿಯೂ ರೋಹಿತ್ ಶರ್ಮಾ ಪಡೆ ಸೋಲು ಅನುಭವಿಸಿದೆ. ಆದರೆ ಇಂತಾ ಪರಿಸ್ಥಿತಿಗಳನ್ನು ಎದುರಿಸಿಯೂ ಯಶಸ್ಸು ಸಾಧಿಸಿದ ಕೆಲ ಉದಾಹರಣೆಗಳನ್ನು ಮುಂಬೈ ಇಂಡಿಯನ್ಸ್ ತಂಡವೇ ಹೊಂದಿದೆ.
ಹೀಗಾಗಿ ಮುಂದಿನ ಪಂದ್ಯಗಳಲ್ಲಿ ತಿರುಗಿ ಬೀಳುವ ಆತ್ಮ ವಿಶ್ವಾಸವನ್ನು ಎಂಐ ವ್ಯಕ್ತಪಡಿಸುತ್ತಿದೆ. ಇನ್ನು ಈ ಸತತ ಸೋಲಿನ ಬಳಿಕ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಮಾತನಾಡಿದ್ದಾರೆ. ತಂಡದ ಪ್ರದರ್ಶನದ ಬಗ್ಗೆ ಸಹಜವಾಗಿಯೇ ಬೇಸರಗೊಂಡಿರುವ ಶರ್ಮಾ ತಂಡ ಎಡವಿದ್ದೆಲ್ಲಿ ಎಂದು ಕಾರಣ ಹೇಳಿಕೊಂಡಿದ್ದಾರೆ.
“ನಾನು ಯಾವಾಗಲೂ ಒಗ್ಗಟ್ಟಿನ ಪ್ರದರ್ಶನದ ಬಗ್ಗೆ ಮಾತನಾಡುತ್ತಿರುತ್ತೇನೆ. ಇದು ಬ್ಯಾಟ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಮುಂಬೈ ಇಂಡಿಯನ್ಸ್ ತಂಡದ ಹಿನ್ನಡೆಗೆ ಕಾರಣವಾಗುತ್ತಿದೆ. ನಾವು ಯಾವಾಗ ಇದನ್ನು ಸಾಧಿಸಲು ಸಾಧ್ಯವಾಗುತ್ತದೆಯೋ ನಾವು ಉತ್ತಮವಾಗುತ್ತೇವೆ” ಎಂದು ಸೋಲಿನ ಬಗ್ಗೆ ಪ್ರಾಮಾಣಿಕ ವಿಮರ್ಶೆ ಮಾಡಿಕೊಂಡಿದ್ದಾರೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ.




