ದಿ ಕಾಶ್ಮೀರ್ ಫೈಲ್ಸ್ ನಿಂದ ಬಂದ ಹಣ ದಾನ ಮಾಡಿ ಎಂದ ಐಎಎಸ್ ಅಧಿಕಾರಿ: ಮಾರ್ಮಿಕವಾಗಿ ಉತ್ತರಿಸಿದ ಅಗ್ನಿಹೋತ್ರಿ

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ. ಈಗಾಗ್ಲೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಾಕಷ್ಟು ರಾಜಕೀಯ ನಾಯಕರುಗಳು ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೆ ಸಾಕಷ್ಟು ಕಡೆಗಳಲ್ಲಿ ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಆದರೆ ಇದೀಗ ವಿವೇಕ್ ಅಗ್ನಿಹೋತ್ರಿ ಮಾಡಿರುವ ಟ್ವೀಟ್ ದೇಶಾದ್ಯಂತ ಸುದ್ದಿಯಾಗುತ್ತಿದೆ.
1990ರಲ್ಲಿ ಕಾಶ್ಮೀರದಲ್ಲಿ ನಡೆದ ಘಟನೆಗಳು, ಕಾಶ್ಮೀರಿ ಪಂಡಿತರ ವಲಸೆ ಮೊದಲಾದ ಘಟನೆಗಳನ್ನು ಆಧರಿಸಿ ತಯಾರಾಗಿರೋ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಈಗಾಗ್ಲೆ 190 ಕೋಟಿ ಕಲೆಕ್ಷನ್ ಮಾಡಿದೆ. ಇದೀಗ ಮಧ್ಯಪ್ರದೇಶದ ಐಎಎಸ್ ಅಧಿಕಾರಿ ನಿಯಾಜ್ ಖಾನ್ ಚಿತ್ರದ ಕುರಿತಾಗಿ ತಮ್ಮ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿದ್ದು ನಿಯಾಜ್ ಖಾನ್ ಟ್ವೀಟ್ ಗೆ ವಿವೇಕ್ ಅಗ್ನಿಹೋತ್ರಿ ಪ್ರತಿಕ್ರಿಯೆ ನೀಡಿದ್ದಾರೆ.
“ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಕಲೆಕ್ಷನ್ 150 ಕೋಟಿ ರೂ ದಾಟಿದ್ದು, ಜನರು ಕಾಶ್ಮೀರಿ ಬ್ರಾಹ್ಮಣರ ಭಾವನೆಗಳಿಗೆ ಗೌರವ ನೀಡಿದ್ದಾರೆ. ನಿರ್ಮಾಪಕರನ್ನು ಗೌರವಿಸುತ್ತಾ, ಅವರು ಚಿತ್ರದಿಂದ ಬಂದ ಹಣವನ್ನು ಕಾಶ್ಮೀರಿ ಬ್ರಾಹ್ಮಣ ಮಕ್ಕಳ ಶಿಕ್ಷಣಕ್ಕೆ ಹಾಗೂ ಮನೆ ನಿರ್ಮಿಸಲು ನೀಡಬೇಕು. ಇದು ದೊಡ್ಡ ಕೊಡುಗೆಯಾಗಲಿದೆ’’ ಎಂದು ಬರೆದಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್ ಕಾಶ್ಮೀರಿ ಬ್ರಾಹ್ಮಣರ ಕಷ್ಟಗಳನ್ನು ತೆರೆದಿಟ್ಟಿದೆ. ಅವರು ಕಾಶ್ಮೀರದಲ್ಲಿ ಸಕಲ ಗೌರವಗಳೊಂದಿಗೆ ಮತ್ತೆ ವಾಸ ಮಾಡಲು ಅವಕಾಶ ಕಲ್ಪಿಸಬೇಕು. ಹಾಗೆಯೇ ನಿರ್ಮಾಪಕರು ದೇಶದ ಇತರ ರಾಜ್ಯಗಳಲ್ಲಿ ಮುಸ್ಲಿಂ ಸಮುದಾಯದ ಮೇಲೆ ನಡೆಯುತ್ತಿರುವ ದಾಳಿಯನ್ನು ಚಿತ್ರದ ಮೂಲಕ ಕಟ್ಟಿಕೊಡಬೇಕು. ಮುಸ್ಲಿಮರು ಕೂಡ ಮನುಷ್ಯರು’’ ಎಂದು ಬರೆದು ನಿಯಾಜ್ ಖಾನ್ ಟ್ವೀಟ್ ಮಾಡಿದ್ದಾರೆ.
ನಿಯಾಜ್ ಖಾನ್ ಟ್ವೀಟ್ ಗೆ ಪ್ರತಿಕ್ರಿಯಿಸಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ‘ನಿಯಾಜ್ ಖಾನ್ ಅವರೇ, 25ನೇ ತಾರೀಖು ಭೋಪಾಲ್ಗೆ ಆಗಮಿಸುತ್ತಿದ್ದೇನೆ. ಅಂದು ನಿಮ್ಮ ಭೇಟಿಗೆ ಅವಕಾಶ ನೀಡಿ. ಆಗ ಇಬ್ಬರು ನಮ್ಮ-ನಮ್ಮ ಚಿಂತನೆಗಳನ್ನು ಹಂಚಿಕೊಳ್ಳೋಣ. ನೀವು ನಮಗೆ ಹೇಗೆ ಸಹಾಯ ಮಾಡಬಹುದು ಎಂದು ತಿಳಿಸಿಕೊಡಿ. ಹಾಗೆಯೇ ನೀವು ಪುಸ್ತಕ ಬರೆದು ಬಂದ ಹಣದಿಂದ ಹೇಗೆ ಸಹಾಯ ಮಾಡಿದ್ದೀರಿ ಹಾಗೂ ಐಎಎಸ್ ಆಫೀಸರ್ ಆಗಿ ಏನೆಲ್ಲಾ ಮಾಡಿದ್ದೀರಿ ಎನ್ನುವುದನ್ನು ಹಂಚಿಕೊಳ್ಳಿ’’ ಎಂದು ಟ್ವೀಟ್ ಮಾಡಿದ್ದಾರೆ.
ಸದ್ಯ ವಿವೇಕ್ ಅಗ್ನಿಹೋತ್ರಿ ಹಾಗೂ ನಿಯಾಜ್ ಖಾನ್ ಟ್ವೀಟ್ ಗಳು ವೈರಲ್ ಆಗಿವೆ. ನಿಯಾಜ್ ಹೇಳಿಕೆಗೆ ಸಾಕಷ್ಟು ಮಂದಿ ವಿರೋಧಿಸಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿರುವ ನಿಯಾಜ್ ಖಾನ್ ದ್ವೇಷಪೂರಿತ ಹೇಳಿಕೆಗಳನ್ನು ಓದಿ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.
