ರೋಹಿತ್ ಶರ್ಮಾ ಬಾರಿಸಿದ ಸಿಕ್ಸರ್ ಗೆ ಮುರಿದೇ ಹೋಯ್ತು ಪ್ರೇಕ್ಷಕನ ಮೂಗಿನ ಮೂಳೆ

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಿನ್ನೆಯಿಂದ ಭಾರತ ಹಾಗೂ ಶ್ರೀಲಂಕ ನಡುವಿನ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಿದೆ. ಮೊದಲ ದಿನದ ಪಂದ್ಯದಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಸಿಕ್ಸರ್ ಹೊಡೆದಿದ್ದು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ರು. ಆದರೆ ರೋಹಿತ್ ಹೊಡೆದ ಸಿಕ್ಸರ್ ಪ್ರೇಕ್ಷಕರೊಬ್ಬರಿಗೆ ಬಡಿದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.
ರೋಹಿತ್ ಹೊಡೆದ ಸಿಕ್ಸರ್ ನೇರವಾಗಿ ಪ್ರೇಕ್ಷಕನ ಮೂಗಿನ ಮೇಲೆ ಬಿದ್ದಿದೆ. ಪರಿಣಾಮ ಮೂಗಿಗೆ ಗಂಭೀರವಾದ ಪೆಟ್ಟು ಬಿದಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ರೋಹಿತ್ ಕೇವಲ 15 ರನ್ ಗಳನ್ನ ಮಾತ್ರವೇ ಭಾರಿಸಿದ್ದು ಈ ವೇಳೆ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿದ್ದರು.
ವಿಶ್ವ ಫೆರ್ನಾಂಡೋ ಎಸೆದ ಬಾಲ್ ಗೆ ರೋಹಿತ್ ಸಿಕ್ಸರ್ ಬಾರಿಸಿದ್ದು ಈ ವೇಳೆ ಪ್ರೇಕ್ಷಕನಿಗೆ ಗಾಯವಾಗಿದೆ. ಈಗಾಗ್ಲೆ ಎಕ್ಸರೇ ಮಾಡಿರೋ ವೈದ್ಯರು ಮೂಗಿನ ಮೂಳೆ ಮುರಿದಿರೋದಾಗಿ ತಿಳಿಸಿದ್ದಾರೆ. 22 ವರ್ಷದ ಯುವಕ ಮೂಗಿನ ಮೂಳೆ ಮುರಿತಕ್ಕೆ ಒಳಗಾಗಿದ್ದು ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಸಹಾಯದಿಂದ ಯುವಕನನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಯುವಕನನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
