ಪೊಲೀಸ್ ಜೀಪ್ ಕಳ್ಳತನ : ಆರೋಪಿಯನ್ನು ಬಂಧಿಸಿದ ಅಣ್ಣಿಗೇರಿ ಪೊಲೀಸರು

ಹುಬ್ಬಳ್ಳಿ : ಪೊಲೀಸ್ ಠಾಣೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಪೊಲೀಸ್ ಜೀಪ್ ವಾಹನವನ್ನೇ ಕಿಲಾಡಿಯೊಬ್ಬ ಎಗರಿಸಿಕೊಂಡ ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊನೆಗೂ ಜೀಪ್ ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಣ್ಣಗೇರಿ ಪಟ್ಟಣದ ಅಂಬಿಕಾ ನಗರದ ನಿವಾಸಿ ಯಲ್ಲಪ್ಪ ಹಡಪದ ಬಂಧಿತ ಆರೋಪಿಯಾಗಿದ್ದಾನೆ. ಪೊಲೀಸ್ ಜೀಪ್‌ನ್ನು ಕದ್ದುಕೊಂಡು ಅಣ್ಣಿಗೇರಿಯಿಂದ ಹಾವೇರಿ ಜಿಲ್ಲೆಯ ಬ್ಯಾಡಗಿವರೆಗೆ ತೆರಳಿದ್ದಾನೆ. ಇದರ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಈಗ ಕದ್ದ ಪೊಲೀಸ್ ವಾಹನ ಸಮೇತ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.
ಪ್ರಕರಣದ ಹಿನ್ನಲೆ:
ಅಣ್ಣಿಗೇರಿ ಪೊಲೀಸ್ ಠಾಣೆಯ KA 25/G-0861 ಸೇರಿದ ಪೊಲೀಸ್ ಜೀಪ್‌ನ್ನು, ಕಳೆದ ದಿನ (ಪೆ.1) ರಂದು ನಸುಕಿನ ಜಾವ 3.30 ರಿಂದ 4 ಗಂಟೆಯ ಸಮಯದ ಅಂತರದಲ್ಲಿ ಬೊಲೆರೋ ವಾಹನ ಕಳ್ಳತನವಾಗಿತ್ತು. ಸುಮಾರು ಐದು ಗಂಟೆಯ ಸುಮಾರಿಗೆ ಠಾಣೆಯ ಸಿಬ್ಬಂದ ಹೊರಗಡೆ ಬಂದು ನೋಡಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು. ಕೂಡಲೇ ಅಲರ್ಟ್ ಆದ ಅಣ್ಣಿಗೇರಿ ಠಾಣೆಯ ಪೊಲೀಸರು ಪಟ್ಟದ ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದರೆ ಬಂಧಿತ ಆರೋಪಿ ಪೊಲೀಸ್ ಕದ್ದ ಪೊಲೀಸ್ ಜೀಪ್‌ನ್ನು ಹಾವೇರಿಯ ಜಿಲ್ಲೆಯವರೆಗೂ ತೆಗೆದುಕೊಂಡು ಹೋಗಿದ್ದಾನೆ.
ಸುಮಾರು 12,50,000 ಸಾವಿರ ರೂಪಾಯಿ ಬೆಲೆಯ ಪೊಲೀಸ್ ಜೀಪನ ಕಳ್ಳತನ ಪ್ರಕರಣ ಬೆನ್ನು ಹತ್ತಿದ್ದ ಪೊಲೀಸರಿಗೆ, ಕಿಲಾಡಿ ಕಳ್ಳನನ್ನು ಕೊನೆಗೂ ಹಾವೇರಿ ಜಿಲ್ಲೆಯ ಬ್ಯಾಡಗಿ ಬಳಿ ಪತ್ತೆ ಹಚ್ಚಿ, ಈಗ ಪಟ್ಟಣದ ಪೊಲೀಸ್ ಠಾಣೆಗೆ ಕದ್ದ ಪೊಲೀಸ್ ವಾಹನದ ಜೊತೆಗೆ ಕರೆ ತಂದಿದ್ದಾರೆ.
ಸದ್ಯ ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನೂ ಬಂಧಿತ ಆರೋಪಿ ನಾಗಪ್ಪ ವಿಚಾರಣೆ ವೇಳೆಯಲ್ಲಿ ಪೊಲೀಸ್ ವಾಹನ ಕದ್ದು ಚಲಾಯಿಸಬೇಕು ಎಂಬ ಆಸೆಯಿಂದ ಈ ಕೃತ್ಯ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



