ಅಧಿಕಾರಕ್ಕಾಗಿ ಆರ್.ಎಲ್. ಜಾಲಪ್ಪ ಕುಟುಂಬದಿಂದ ಬೃಹತ್ ಪ್ರತಿಭಟನೆ

ಕೋಲಾರ: ಮಾಜಿ ಕೇಂದ್ರ ಸಚಿವ ಆರ್.ಎಲ್. ಜಾಲಪ್ಪ ನಿಧನ ನಂತರ ಸಂಸ್ಥೆಯಲ್ಲಿ ಅಧಿಕಾರಕ್ಕಾಗಿ ಕಲಹ ಶುರುವಾಗಿದೆ. ಜಿಲ್ಲೆಯ ಪ್ರತಿಷ್ಠಿತ ದೇವರಾಜ ಅರಸು ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಸ್ಥಾನಕ್ಕೆ ಜಾಲಪ್ಪನವರ ಸಂಬಂಧಿ ಜಿ.ಹೆಚ್ ನಾಗರಾಜ್ ಅವರನ್ನು ಆಯ್ಕೆ ಮಾಡಲಾಗಿತ್ತು.
ಅಧ್ಯಕ್ಷರ ಆಯ್ಕೆ ಖಂಡಿಸಿ ಆರ್.ಎಲ್.ಜಾಲಪ್ಪ ಮಕ್ಕಳು ಹಾಗೂ ನೂರಾರು ಬೆಂಬಲಿಗರಿಂದ ಬೃಹತ್ ಪ್ರತಿಭಟನೆ ಮಾಡಲಾಯಿತು.ಕೋಲಾರ ನಗರದ ಟಮಕ ಬಳಿ ಇರುವ ಮೆಡಿಕಲ್ ಕಾಲೇಜು ಬಳಿ ಆರ್.ಎಲ್.ಜಾಲಪ್ಪ ಮಕ್ಕಳಾದ ನರಸಿಂಹಸ್ವಾಮಿ, ರಾಜೇಂದ್ರ, ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ.
ಜಾಲಪ್ಪ ನಿಧನ ನಂತರ ದೇವರಾಜ ಅರಸು ಎಜುಕೇಶನ್ ಟ್ರಸ್ಟ್ ನ ನೂತನ ಅಧ್ಯಕ್ಷರಾಗಿ ಜಾಲಪ್ಪ ಸಂಬಂಧಿ ಜಿ.ಹೆಚ್.ನಾಗರಾಜ್ ಆಯ್ಕೆ ಮಾಡಲಾಗಿರುವುದನ್ನು ಖಂಡಿಸಿ ಆರ್.ಎಲ್.ಜಾಲಪ್ಪ ಕುಟುಂಬಸ್ಥರಿಗೆ ಅಧ್ಯಕ್ಷ ಸ್ಥಾನ ನೀಡಲು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಸದ್ಯ ಕೋಲಾರ ನಗರ ಹೊರವಲಯದಲ್ಲಿರುವ ಶ್ರೀ ದೇವರಾಜ್ ಅರಸು ಎಜುಕೇಶನ್ ಟ್ರಸ್ಟ್ ಹಾಗೂ ಮೆಡಿಕಲ್ ಕಾಲೇಜ್ ಮತ್ತು ಶಿಕ್ಷಣ ಸಂಸ್ಥೆಗಳ ಅಧಿಪತ್ಯಕ್ಕಾಗಿ ಮುಸುಕಿನ ಗುದ್ದಾಟ ನಡೆದಿದೆ. ಜಾಲಪ್ಪ ಅವರ ಹಿರಿಯ ಮಗ ಹಾಗೂ ಮಾಜಿ ಶಾಸಕ ನರಸಿಂಹಸ್ವಾಮಿಗೆ ಅಧ್ಯಕ್ಷ ಪಟ್ಟ ನೀಡುವಂತೆ ಪಟ್ಟು ಹಿಡಿಯಲಾಗಿದೆ.
ಇನ್ನು ಪ್ರತಿಭಟನೆ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತಳ್ಳಾಟ ನೂಕಾಟ ನಡೆದಿದೆ. ಪೊಲೀಸರನ್ನು ತಳ್ಳಿ ಪ್ರತಿಭಟನಾಕಾರರು ಕಾಲೇಜು ಒಳಕ್ಕೆ ನುಗ್ಗಿದ್ದಾರೆ.ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡ ಲಕ್ಷ್ಮೀಪತಿ ತಲೆಗೆ ಗಾಯವಾಗಿದೆ. ಹಾಗೂ ಪಿಎಸ್ಐ ಅಣ್ಣಯ್ಯ ಅವರ ಕಾಲಿಗೂ ಗಾಯವಾಗಿದೆ. ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.
