ಕೊರೊನಾಗೆ ಬಲಿಯಾದ ಕಿರಾತಕ ನಿರ್ದೇಶಕ

ಕನ್ನಡ ಚಿತ್ರರಂಗ ಕೊರೊನಾದಿಂದ ಸಾಕಷ್ಟು ಸಂಕಷ್ಟ ಅನುಭವಿಸುತ್ತಿದೆ. ಕೊವಿಡ್ನಿಂದಾಗಿ ಚಿತ್ರರಂಗ ಸಾಲು ಸಾಲು ಕಲಾವಿದರನ್ನ ಕಳೆದುಕೊಂಡಿದೆ. ಇದೀಗ ಕೊರೊನಾ ಮಹಾಮಾರಿಗೆ ಕನ್ನಡ ಖ್ಯಾತ ನಿರ್ದೇಶಕರು ಬಲಿಯಾಗಿದ್ದಾರೆ.
ಕನ್ನಡ ಚಿತ್ರರಂಗಕ್ಕೆ 2022ರ ಆರಂಭದಲ್ಲಿಯೇ ಕಹಿ ಸುದ್ದಿ ಕೇಳಿ ಬಂದಿದೆ. ಸ್ಯಾಂಡಲ್ವುಡ್ನಲ್ಲಿ ಹಲವು ಸಿನಿಮಾಗಳನ್ನ ನಿರ್ದೇಶನ ಮಾಡಿ ಖ್ಯಾತಿ ಘಳಿಸಿದ್ದ ನಿರ್ದೇಶಕ ಪ್ರದೀಪ್ ರಾಜ್ ಕೊವಿಡ್ಗೆ ಬಲಿಯಾಗಿದ್ದಾರೆ.
46 ವರ್ಷ ವಯಸ್ಸಿನ ಪ್ರದೀಪ್ ರಾಜ್ ಹಲವು ವರ್ಷಗಳಿಂದ ಸಕ್ಕರೆ ರೋಗದಿಂದ ಬಳಲುತ್ತಿದ್ದರು. ಇತ್ತೀಚೆಗೆ ಅವರಿಗೆ ಕೊರೊನಾ ಸೋಂಕು ತಗುಲಿದ್ದು ಇಂದು ಬೆಳಗಿನ ಜಾವ 3 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಪ್ರದೀಪ್ ರಾಜ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನ ಅಗಲಿದ್ದು ಅಂತ್ಯಕ್ರಿಯೆಯನ್ನ ಪಾಂಡಿಚೆರಿಯಲ್ಲಿ ಇಂದು ಮಧ್ಯಾಹ್ನ ನಡೆಸಲು ಕುಟುಂಬ ಸದಸ್ಯರು ತೀರ್ಮಾನಿಸಿದ್ದಾರೆ.
2011ರಲ್ಲಿ ತೆರೆಕಂಡ ಯಶ್ ನಟನೆಯ ಕಿರಾತನ ಸಿನಿಮಾವನ್ನ ಪ್ರದೀಪ್ ರಾಜ್ ನಿರ್ದೇಶನ ಮಾಡಿದ್ದರು. ಈ ಚಿತ್ರ ಯಶ್ ಹಾಗೂ ಪ್ರದೀಪ್ ರಾಜ್ಗೆ ಸಾಕಷ್ಟು ಹೆಸರು ತಂದು ಕೊಟ್ಟಿತ್ತು. ಇನ್ನು ಕಿರಾತಕ 2 ಸಿನಿಮಾವನ್ನ ಪ್ರದೀಪ್ ಅವರೇ ನಿರ್ದೇಶಿಸಿದ್ದು ಸಿನಿಮಾ ಇನ್ನಷ್ಟೇ ರಿಲೀಸ್ ಆಗಬೇಕಿದೆ.
ಪ್ರದೀಪ್ ರಾಜ್ ನಿಧನಕ್ಕೆ ಅನೇಕರು ಕಂಬನಿ ಮಿಡಿದಿದ್ದಾರೆ. ಸತೀಶ್ ನೀನಾಸಂ ನಟನೆಯ ಅಂಜದ ಗಂಡು, ಕಾರ್ತಿಕ್ ಜಯರಾಮ್, ಚಿಕ್ಕಣ್ಣ ಕಾಣಿಸಿಕೊಂಡಿದ್ದು ಬೆಂಗಳೂರು 560023, ದುನಿಯಾ ವಿಜಯ್ ನಟನೆಯ ರಜನಿ ಕಾಂತ ಸೇರಿದಂತೆ ಸಾಕಷ್ಟು ಸಿನಿಮಾಗಳನ್ನ ಪ್ರದೀಪ್ ರಾಜ್ ನಿರ್ದೇಶನ ಮಾಡಿದ್ದರು.
ಕಳೆದ 15 ವರ್ಷಗಳಿಂದ ಡಯಾಬಿಟೀಸ್ನಿಂದ ಬಳಲುತ್ತಿದ್ದ ಪ್ರದೀಪ್ ರಾಜ್ ಅವರಿಗೆ ಆರು ತಿಂಗಳಿನಿಂದ ಲಿವರ್ ಸಮಸ್ಯೆ ಕೂಡ ಶುರುವಾಗಿತ್ತು. ಆದರೆ ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಸರಿಯಾದ ಕಾಳಜಿ ವಹಿಸದೆ ಒಳಗಡೆ ಇನ್ಫೆಕ್ಷನ್ ಆಯಿತು. ಜೊತೆಗೆ ತಮಗೆ ಇನ್ನೂ ಚಿಕ್ಕ ವಯಸ್ಸು, ಮಾತ್ರೆ ತೆಗೆದುಕೊಂಡರೆ ಸರಿಯಾಗುತ್ತೆ ಎಂದು ನಿರ್ಲಕ್ಷ್ಯ ಮಾಡಿದ್ರು ಎಂದು ಪ್ರದೀಪ್ ರಾಜ್ ಸಹೋದರ ಪ್ರಶಾಂತ್ ರಾಜ್ ಹೇಳಿದ್ದಾರೆ.



