Latestಜಿಲ್ಲಾ ಸುದ್ದಿದಾವಣಗೆರೆ

ಮಕ್ಕಳಿಗೆ ಕಂಟಕವಾಗುತ್ತಿರುವ ಕೊರೊನಾ : ದಾವಣಗೆರೆಯಲ್ಲಿ 60 ವಿದ್ಯಾರ್ಥಿಗಳಲ್ಲಿ ದೃಢಪಟ್ಟ ಸೋಂಕು..!

ದಾವಣಗೆರೆ : ಇಷ್ಟು ದಿನ ತಣ್ಣಗಿದ್ದ ಕೊರೊನಾ ವೈರಸ್ ಹೆಮ್ಮಾರಿ ಮತ್ತೆ ಆರ್ಭಟಿಸತೊಡಗಿದೆ. ಜಿಲ್ಲೆಯಲ್ಲಿ ಮಕ್ಕಳಿಗೆ ಹೆಚ್ಚಾಗಿ ಸೋಂಕು ತಗುಲುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈಗ ಸಕ್ರಿಯ ಪ್ರಕರಣಗಳಲ್ಲಿ ಹೆಚ್ಚಾಗಿ ವಿದ್ಯಾರ್ಥಿಗಳನ್ನು ಕಾಡುತ್ತಿರುವುದು ಚಿಂತೆಗೀಡು ಮಾಡಿದೆ. ಇದು ಪೋಷಕರಿಗೆ ಆತಂಕ ತಂದಿದೆ.

ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಚನ್ನಗಿರಿ ತಾಲೂಕಿನ ಮಾವಿನಹೊಳೆಯ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಮಂಗಳವಾರ ಪ್ರಾಂಶುಪಾಲರೂ ಸೇರಿದಂತೆ 32 ವಿದ್ಯಾರ್ಥಿಗಳಲ್ಲಿ ಪಾಸಿಟಿವ್ ಇದ್ದದ್ದು ದೃಢಪಟ್ಟಿತ್ತು.ಆ ಬಳಿಕ ಎಲ್ಲಾ ವಿದ್ಯಾರ್ಥಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ. ಈ ಪೈಕಿ ಮತ್ತೆ 23 ವಿದ್ಯಾರ್ಥಿಗಳಲ್ಲಿ ಸೋಂಕು ಇರುವುದು ಖಚಿತಪಟ್ಟಿದ್ದು, ಈ ಮೂಲಕ ಇಂದಿರಾ ಗಾಂಧಿ ವಸತಿ ಶಾಲೆಯ 54 ವಿದ್ಯಾರ್ಥಿಗಳಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.

ವಸತಿ ಶಾಲೆಯಲ್ಲಿ 129 ಮಕ್ಕಳಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಈ ವಿದ್ಯಾರ್ಥಿಗಳ ಗಂಟಲುದ್ರವ ಪಡೆದು ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಈ ವರದಿ ಬಂದಿದ್ದು, 54 ವಿದ್ಯಾರ್ಥಿಗಳಲ್ಲಿ ಕೋವಿಡ್ ಪಾಸಿಟಿವ್ ಖಚಿತವಾಗಿದೆ. ಹಾಸ್ಟೆಲ್ ನಲ್ಲಿ ಸೋಂಕಿತರ ಸಂಖ್ಯೆ 55ಕ್ಕೇರಿದೆ. ರೋಗ ಲಕ್ಷಣ ಇರುವ ಕೆಲ ಮಕ್ಕಳನ್ನ ಚನ್ನಗಿರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ರೋಗ ಲಕ್ಷಣವಿಲ್ಲದೆ ಸೋಂಕು ಪತ್ತೆಯಾದ ಮಕ್ಕಳಿಗೆ ಹಾಸ್ಟೆಲ್ ನಲ್ಲೇ ಕ್ವಾರಂಟೈನ್ ಮಾಡಲಾಗಿದೆ. ಇದುವರೆಗೆ ಹಾಸ್ಟೆಲ್ ನಲ್ಲಿ ಇರೋ 231 ಮಕ್ಕಳಿಗೆ ಆರ್ ಟಿಪಿ ಆರ್ ಟೆಸ್ಟ್ ಮಾಡಲಾಗಿತ್ತು.

ಜಿಲ್ಲೆಯ ಜಗಳೂರು ಪಟ್ಟಣದ ಖಾಸಗಿ ಪ್ರೌಢಶಾಲೆಯೊಂದರ ಆರು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದ್ದು, ಶಾಲೆಯನ್ನು ಸೀಲ್ ಡೌನ್ ಮಾಡಲಾಗಿದೆ. ಶಾಲೆಯ 195 ವಿದ್ಯಾರ್ಥಿಗಳನ್ನು ಟೆಸ್ಟ್ ಮಾಡಲಾಗಿದ್ದು, ಎಲ್ಲರನ್ನೂ ಹೋಂ ಐಸೋಲೇಷನ್ ನಲ್ಲಿಡಲಾಗಿದೆ. ಒಂದು ವಾರದವರೆಗೆ ಶಾಲೆಗೆ ರಜೆ ಘೋಷಿಸಲಾಗಿದ್ದು, ಶಾಲೆಯನ್ನು ಸ್ಯಾನಿಟೈಸ್ ಮಾಡಲಾಗಿದೆ. ಪೋಷಕರಿಗೂ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಯಾರೂ ನಿರ್ಲಕ್ಷ್ಯ ವಹಿಸಬಾರದು. ಪಟ್ಟಣ ಪಂಚಾಯಿತಿಯಿಂದ ಶಾಲೆಯ 22 ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button