ಭಿಕ್ಷೆ ಬೇಡಿ ಸಂಗ್ರಹಿಸಿದ ಹಣದ ಚೆಕ್ ವಾಪಸ್ ನೀಡಿದ ತಹಶೀಲ್ದಾರ್

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಕಛೇರಿ ಎಂದರೆ ಅಲ್ಲಿ ಜನರು ಕಾಣಿಕೆ ನೀಡದೇ ಕೆಲಸಗಳು ಆಗುವುದು ತುಂಬಾ ಕಡಿಮೆ. ಸಾರ್ವಜನಿಕರು ಪ್ರತಿದಿನ ಚಿಕ್ಕ ಪುಟ್ಟ ಕೆಲಸದಿಂದ ಹಿಡಿದು ಯಾವುದೇ ಕೆಲಸ ಆಗಬೇಕು ಎಂದರೆ ಇಲ್ಲಿ ಹಣ ನೀಡಬೇಕು.
ಇಲ್ಲದಿದ್ದರೆ ಕಛೇರಿಗೆ ಅಲೆದಾಡಿಸುವ ಕೆಲಸ ನಿರಂತರವಾಗಿ ನಡೆಯುತ್ತದೆ. ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಕಂದಾಯ ಇಲಾಖೆಯಲ್ಲಿ ಸ್ಥಳೀಯ ನಿವಾಸಿ ಅಚ್ಯುತ್ ಕುಮಾರ್ ಎಂಬುವವರು ಪಹಣಿ ಪತ್ರಿಕೆಯಲ್ಲಿ ಹೆಸರನ್ನು ಬದಲಾಯಿಸಲು ಕಛೇರಿಗೆ ಅಲೆದಿದ್ದಾರೆ. ಅಧಿಕಾರಿ ಕೇಳಿದ ದಾಖಲೆ ನೀಡಿದರೂ ಲಂಚ ನೀಡಲಿಲ್ಲ ಎನ್ನುವ ಏಕೈಕ ಕಾರಣಕ್ಕೆ ಕೆಲಸವನ್ನು ವಿಳಂಬ ಮಾಡಿದ್ದರು.

ಅಧಿಕಾರಿಗಳ ಎಂಜಲು ಆಸೆಗೆ ಬೇಸತ್ತ ಅವರು ಸರ್ಕಾರಿ ಕಛೇರಿಯಲ್ಲಿ ಅಧಿಕಾರಿಯ ಹೆಸರಿನಲ್ಲಿ ಬಿಕ್ಷೆ ಬೇಡಿ ಹಣ ಹೊಂದಿಸಿ ಯಲ್ಲಾಪುರ ತಹಶೀಲ್ದಾರ್ ಗೆ ಚೆಕ್ ಮೂಲಕ ನೀಡಿದ್ದರು.ನಂತರ ತಹಶೀಲ್ದಾರ್ ಅವರು ಈ ಹಣ ಸ್ವೀಕರಿಸಲು ನಿರಾಕರಿಸಿದ್ದರು. ಆದರೆ ಅಧಿಕಾರಿಗೆ ಲಂಚ ನೀಡುವುದಕ್ಕಾಗಿ ಬಿಕ್ಷೆ ಬೇಡಿ ಸಂಗ್ರಹಿಸಿದ ಹಣವನ್ನು ತಹಶೀಲ್ದಾರ್ ಮೂಲಕ ರೆಡ್ ಕ್ರಾಸ್ ಸಂಸ್ಥೆಗೆ ನೀಡಿದ್ದರು.
ಆದರೆ ಇದೀಗ ಈ ಹಣವನ್ನು ರೆಡ್ ಕ್ರಾಸ್ ಸಂಸ್ಥೆ ಸ್ವೀಕರಿಸಿಲ್ಲ.ಅಧಿಕಾರಿಗಳಿಗೆ ಲಂಚ ನೀಡಲು ಭಿಕ್ಷೆ ಬೇಡಿ ಸಂಗ್ರಹಿಸಿದ್ದು, ಇದನ್ನು ಸ್ವೀಕರಿಸಲು ಆಗುವುದಿಲ್ಲ. ಹೀಗಾಗಿ ತಾವು ಯಾರ ಬಳಿ ಭಿಕ್ಷೆ ಬೇಡಿ ಹಣ ಸಂಗ್ರಹಿಸಿದ್ದಿರೋ ಅದನ್ನು ಅವರಿಗೆ ಮರಳಿಸುವಂತೆ ಕೇಳಿಕೊಂಡಿದ್ದಾರೆ.



