Breaking NewsLatestರಾಜ್ಯರಾಮನಗರ

ಅರತಕ್ಷತೆ ಮುಗಿಸಿ ನಡುರಾತ್ರಿ ಪ್ರಿಯಕರನೊಂದಿಗೆ ವಧು ಪರಾರಿ

ರಾಮನಗರ: ಬಗೆ ಬಗೆ ಭಕ್ತ ಭೋಜನಗಳ ಘಮ ಘಮ, ಎಲ್ಲೆಲ್ಲೂ ಹೂವಿನ ಚಿತ್ತಾರ, ಹೊರಗಡೆ ಜಗಮಗಿಸುವ ವಿದ್ಯುತ್ ಅಲಂಕಾರ, ಮಂಗಳ ವಾದ್ಯಗಳ ಝೇಂಕಾರ ಮುಂಜಾನೆ ವರನ ಕೈಯಿಂದ ಮಾಂಗಲ್ಯ ಧಾರಣೆ ಮಾಡಿಸಿಕೊಳ್ಳಬೇಕಿದ್ದ ವಧು ನಾಪತ್ತೆಯಿಂದ ಅಕ್ಷರಶಃ ಕಲ್ಯಾಣ ಮಂಪಟದಲ್ಲಿ ಸೂತಕದ ಛಾಯೆ, ಬಿಕೋ ಎನ್ನುತ್ತಿದ್ದ ದೃಶ್ಯ…

ಇದು ಮಾಯಾ ಬಜಾರ್ ಸಿನಿಮಾದ ಕಥೆಯಲ್ಲ. ಚನ್ನಪಟ್ಟಣದ ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯದ ಬಳಿ ಇರುವ ದೊಡ್ಡ ಕಲ್ಯಾಣ ಮಂಟಪದಲ್ಲಿ ಕಂಡು ಬಂದ ದೃಶ್ಯ….

ಚನ್ನಪಟ್ಟಣದ ಮಳೂರಿನ ಕುಟುಂಬವೊಂದರ ಅದ್ದೂರಿ ಮದುವೆಯೊಂದು ಮಂಟಪದಲ್ಲಿ ನಿಗಧಿಯಾಗಿತ್ತು. ರಾತ್ರಿಯೇ ಅದ್ದೂರಿ ಆರತಕ್ಷತೆಯನ್ನು ಆಯೋಜಿಸಿದ್ದರು. ಮಳೂರು ಗ್ರಾಮದ ವಧು ಹಾಗೂ ಅದೇ ಗ್ರಾಮದ ದೂರದ ಊರಿನ ಮೊಮ್ಮಗ ಸತಿ-ಪತಿಗಳಾಗಬೇಕಿದ್ದರು. ವರ ಪ್ರೊಫೆಸರ್ ಆಗಿದ್ದರಿಂದ ಮದುವೆಗೆ ಲಕ್ಷಾಂತರ ರೂ ವೆಚ್ಚ ಮಾಡಲಾಗಿತ್ತು ಎಂದು ಹೇಳಲಾಗಿದೆ.

ಇತ್ತೀಚಿನ ಮದುವೆಗಳಲ್ಲಿ ತಾಳಿ ಬಿಗಿಯುವ ಸಂದರ್ಭಕ್ಕಿಂತ ಹಿಂದಿನ ರಾತ್ರಿ ಆಯೋಜನೆ ಮಾಡುವ ಆರತಕ್ಷತೆಗೆ ಬಂದು ನವ ಭಾವಿ ವಧುವರರ ಜೊತೆ ಫೋಜ್ ಕೊಡುವವರೇ ಹೆಚ್ಚು. ಆರತಕ್ಷತೆ ಮುಗಿದ ತಕ್ಷಣ ವರನಿಗೆ ವಧು, ವಧುವಿಗೆ ವರನ ಚಿಂತೆ, ಆರತಕ್ಷತೆಗೆ ಬಂದವರಿಗೆ ಊಟದ ಚಿಂತೆ ಎಂಬಂತೆ ಅದ್ದೂರಿ ಭೋಜನ ಕೂಡ ನಡೆಯಿತು.

ನಡುರಾತ್ರಿ ವಧು ಮಾಯ:

ರಾತ್ರಿ ೮ ರಿಂದ ೧೦ ರವರೆಗೂ ಅರತಕ್ಷತೆಯಲ್ಲಿ ನಿಂತು ಬಂದವರ ಜೊತೆಯಲ್ಲಿ ಫೋಟೋಗೆ ಫೊಸ್ ಕೊಟ್ಟು ಸುಸ್ತಾಗಿದ್ದ ವಧು ಊಟ ಮಾಡಿ ವಿಶ್ರಾಂತಿಗೆ ಹೋಗಿದ್ದಾರೆ. ರಾತ್ರಿ ೧ರ ಸಮಯದಲ್ಲಿ ವಧುವಿನ ಕೊಠಡಿಯಲ್ಲಿ ವಧು ಮಾಯ. ವಧುವಿನ ಜೊತೆ ಮಲಗಿದ್ದವರು ಶೌಚಕ್ಕೆ ಹೋಗಿರಬಹುದೆಂದು ಗಂಟೆಗಟ್ಟಲೇ ಕಾದರೂ ವಧು ಅಲ್ಲಿರಲಿಲ್ಲ. ಎಲ್ಲೋ ಹೊರಗಡೆ ಇರಬೇಕೆಂದು ಹೊರಗಡೆ ನೋಡಿದರೂ ಅಲ್ಲಿಯೂ ಇಲ್ಲ. ಆತಂಕ ಹಾಗೂ ದಿಗ್ಭ್ರಮೆಗೊಳಗಾದ ವಧುವಿನ ಕಡೆಯವರು ಕಲ್ಯಾಣ ಮಂಟಪವನ್ನೆಲ್ಲಾ ಹುಡುಕಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ವಧು ನಾಪತ್ತೆಯಾಗಿರುವುದನ್ನು ಖಾತ್ರಿ ಮಾಡಿಕೊಂಡ ಹೆಣ್ಣು ಹೆತ್ತವರಿಗೆ ಆಕಾಶವೇ ಕಳಚಿ ಬಿದ್ದಂತ ಅನುಭವವಾಗಿದೆ. ಅಷ್ಟೊತ್ತಿಗಾಗಲೇ ವರ ಹಾಗೂ ಆತನ ಕಡೆಯವರಿಗೆ ವಧು ನಾಪತ್ತೆಯ ವಿಚಾರ ತಿಳಿದು ಅವರಿಗೂ ಅವಮಾನವಾದಂತಾಗಿದೆ.

ಬಾಣಸಿಗರಿಂದ ಉಪಹಾರ ಹಾಗೂ ಭೋಜನಕ್ಕೆ ತಯಾರು:

ಬೆಳಿಗ್ಗೆ ಉಪಹಾರಕ್ಕಾಗಿ ಹಲವಾರು ರೀತಿಯ ಸಿಹಿ ಹಾಗೂ ಖಾರದ ಖಾದ್ಯಗಳು, ಮಾಂಗಲ್ಯ ಧಾರಣೆ ಮುಗಿದ ನಂತರ ಊಟಕ್ಕಾಗಿ ೨೦ ಕ್ಕೂ ಹೆಚ್ಚು ವಿವಿಧ ಬಗೆಯ ಖಾದ್ಯಗಳನ್ನು ತಯಾರು ಮಾಡುವಲ್ಲಿ ಸಿದ್ದರಿದ್ದರೂ ಪಾಪ ಅವರಿಗೇನು ಗೊತ್ತು ನಾವು ಮಾಡುತ್ತಿರುವ ಭೋಜನ ಸವಿಯುವ ಯೋಗ ಯಾರಿಗೂ ಇಲ್ಲ ಎಂದು.

ನಡೆಯಬೇಕಿದ್ದ ಮದುವೆ, ವಧು ನಾಪತ್ತೆಯಿಂದ ಮುರಿದು ಬಿದ್ದಿದೆ ಎಂದು ವಧುವರರ ಕಡೆಯವರಿಂದ ಸುದ್ದಿ ಹರಿದು ಹೋದ ಪರಿಣಾಮ ಶೇ ೮೫ ರಷ್ಟು ಮಂದಿ ಕಲ್ಯಾಣ ಮಂಟಪದತ್ತ ಮುಖ ಮಾಡಲಿಲ್ಲ. ಆದರೂ ಕೆಲವರು ಕಲ್ಯಾಣ ಮಂಟಪದ ಬಳಿ ಬಂದು ಘಟನೆಯ ಬಗ್ಗೆ ಮಾಹಿತಿ ಪಡೆದು ಬಂದ ದಾರಿಗೆ ಸುಂಕವಿಲ್ಲ ಎಂದು ಹೋಗುತ್ತಿದ ದೃಶ್ಯ ಸಾಮಾನ್ಯವಾಗಿತ್ತು.

ಪ್ರೀತಿಸಿದ ಯುವಕನ ಜೊತೆ ಪರಾರಿ:

ಡಿಪ್ಲೋಮಾ ಮಾಡುತ್ತಿದ್ದ ವಧು ತನ್ನ ವಿದ್ಯಾಭ್ಯಾಸದ ಅವಧಿಯಲ್ಲೇ ತಾಲ್ಲೂಕಿನ ಕುಗ್ರಾಮದ ಕೇಬಲ್ ನಡೆಸುತ್ತಿದ್ದ ಯುವಕನನ್ನು ಪ್ರೀತಿಸುತ್ತಿದ್ದಳೆನ್ನಲಾಗಿದೆ. ಮೊದಲೇ ತನ್ನ ಪ್ರೀತಿಯನ್ನು ಹೆತ್ತವರ ಜೊತೆ ಹೇಳಿದ್ದು ಈಕೆ ಮನೆಯವರು ಗೊತ್ತು ಮಾಡಿದ ವರನನ್ನು ಒಪ್ಪಿಕೊಳ್ಳುವಂತೆ ನಾಟಕವಾಡಿ ಮದುವೆಗೆ ತಯಾರು ನಡೆಸಿ ಕೋಟ್ಯಾಂತರ ರೂ ಖರ್ಚು ಮಾಡಿಸಿ, ರಾತ್ರೋ ರಾತ್ರಿ ಪ್ರೀತಿಸಿದ ಯುವಕನ ಜೊತೆ ೫ ಲಕ್ಷಕ್ಕೂ ಹೆಚ್ಚು ಮೌಲ್ಯದ ಒಡವೆ, ತನ್ನ ಅಕೌಂಟ್ ನಲ್ಲಿದ್ದ ೭ ಲಕ್ಷ ಹಣದೊಂದಿಗೆ ಪರಾರಿಯಾಗಿದ್ದಾಳೆ. ಇದರಿಂದ ಆ ಕುಟುಂಬ ನೊಂದಿದೆ. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button