ಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ಆರ್ ಆ್ಯಂಡ್ ಡಿ ಹೊಸ ನೀತಿ ರೂಪಿಸಲು ಕಾರ್ಯಪಡೆ ರಚನೆ: ಸಿಎಂ ಬೊಮ್ಮಾಯಿ

ಧಾರವಾಡ: ಕೃಷಿ, ತೈಲ, ಕೈಗಾರಿಕೆ ಮತ್ತಿತರ ಎಲ್ಲಾ ರಂಗಗಳಲ್ಲಿ ಇಂದು ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಆ್ಯಂಡ್ ಡಿ) ಅಗತ್ಯವಾಗಿದೆ. ರಾಜ್ಯದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯದ 180 ಆರ್ ಆ್ಯಂಡ್ ಡಿ ಕೇಂದ್ರಗಳಿವೆ. ಅವುಗಳಿಗೆ ಹೆಚ್ಚು ಮಹತ್ವ ನೀಡಿ, ಕೈಗಾರಿಕೆ, ಕೃಷಿ, ಆಹಾರ ರಂಗದಲ್ಲಿ ಆರ್ ಆ್ಯಂಡ್ ಡಿ ಬಳಕೆಗೆ ಹೆಚ್ಚು ಒತ್ತು ನೀಡಲು ಸರ್ಕಾರ ಉದ್ದೇಶಿಸಿದೆ. ಹೊಸ ಆರ್ ಆ್ಯಂಡ್ ಡಿ ನೀತಿ ರಚನೆಗೆ ಕಾರ್ಯಪಡೆ ಅಧ್ಯಕ್ಷರನ್ನಾಗಿ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಉಪಕುಲಪತಿ ಡಾ.ಅಶೋಕ್​​​ ಶೆಟ್ಟರ್ ಅವರನ್ನು ನೇಮಿಸಲು ಚಿಂತನೆ ನಡೆದಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿದರು.

ಹುಬ್ಬಳ್ಳಿಯ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜಿನ 75 ನೇ ವರ್ಷಾಚರಣೆ ಹಾಗೂ ಕೆಎಲ್‌ಇ ಟೆಕ್‌ ಪಾರ್ಕ್ ಉದ್ಘಾಟಿಸಿ ಮಾತನಾಡಿದರು. ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಕೆಎಲ್‌ಇ ಟೆಕ್‌ಪಾರ್ಕಿನ ಅಭಿವೃದ್ಧಿಗೆ ಅಗತ್ಯವಾಗಿರುವ ಇನ್ನೂ 2 ಕೋಟಿ ರೂ.ಗಳನ್ನು ಹಳೆಯ ವಿದ್ಯಾರ್ಥಿಗಳ ಸಂಘದ ಮೂಲಕ ಕ್ರೋಢೀಕರಿಸಿ ನೀಡಲಾಗುವುದು. ಸ್ಟಾರ್ಟ್ ಅಪ್‌ಗಳ ಉತ್ತೇಜನಕ್ಕಾಗಿ ಹುಬ್ಬಳ್ಳಿ ಮತ್ತು ಕಲಬುರ್ಗಿಯಲ್ಲಿ ಪ್ರಾದೇಶಿಕ ಕಚೇರಿಗಳನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಕರ್ನಾಟಕದ ಸಮಗ್ರ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ದೊಡ್ಡದು. ಯುವಕರಲ್ಲಿ ವಿದ್ಯೆ,ವ್ಯಕ್ತಿತ್ವ ನಿರ್ಮಾಣ ಮಾಡುವುದು ಸಂಸ್ಥೆ ,ಸರ್ಕಾರಗಳ ಜವಾಬ್ದಾರಿ. ಕಾಲೇಜಿನ ಹಳೆಯ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ ಸಂಸ್ಥೆಗೆ, ಸಮಾಜಕ್ಕೆ ಉತ್ತಮ ಮಾನವ ಸಂಪನ್ಮೂಲವಾಗಿ ಕೊಡುಗೆಗಳನ್ನು ಮರಳಿ ನೀಡಬೇಕು.‌ ಕೆಎಲ್‌ಇ ಸಂಸ್ಥೆಯ ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜು ವಿವಿಧ ಬಹು ಅಧ್ಯಯನ ಶಿಸ್ತುಗಳಲ್ಲಿ ಮಾದರಿಯಾಗಿ ರೂಪುಗೊಂಡಿದೆ. ಇಂದು ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜಿನ ಸಂಪೂರ್ಣ ಸ್ವರೂಪವೇ ಬದಲಾಗಿದ್ದು, ಮತ್ತೊಮ್ಮೆ ವಿದ್ಯಾರ್ಥಿಯಾಗಿ ಪ್ರವೇಶಪಡೆಯಲು ಮನಸ್ಸಾಗುತ್ತಿದೆ ಎಂದು ತಮಗೆ ವಿದ್ಯೆ ನೀಡಿದ ಸರಸ್ವತಿ ದೇಗುಲದ ಬಗ್ಗೆ ಮನದುಂಬಿ ಮಾತನಾಡಿದರು.

ವಿದ್ಯಾರ್ಥಿಗಳು ಉದ್ಯೋಗಿಗಳಾಗದೇ ಮತ್ತೊಬ್ಬರಿಗೆ ಕೆಲಸ ನೀಡುವ ಉದ್ಯಮಪತಿಗಳಾಗಬೇಕು ಸಚಿವ ನಿರಾಣಿ

ಬೃಹತ್ , ಮಧ್ಯಮ ಕೈಗಾರಿಕೆ ಸಚಿವರಾದ ಮುರುಗೇಶ್ ನಿರಾಣಿ ಮಾತನಾಡಿ, ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜಿನ ಕಾರ್ಯಕ್ರಮದಲ್ಲಿ ಇಂದು ಮುಖ್ಯಮಂತ್ರಿಯವರೊಂದಿಗೆ ಹಂಚಿಕೊಳ್ಳುತ್ತಿರುವುದು, ತವರಿಗೆ ಬಂದಿರುವ ಸಂತಸದ ಭಾವನೆ ಮೂಡಿಸಿದೆ. ಕೆಎಲ್‌ಇ ಸಪ್ತರ್ಷಿಗಳ ಪ್ರಯತ್ನದಿಂದ ಈ ಭಾಗದಲ್ಲಿ ಶಿಕ್ಷಣದ ಕ್ರಾಂತಿಯಾಗಲು,ವಿಶೇಷವಾಗಿ ಮಹಿಳೆಯರು ತಾಂತ್ರಿಕ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. 3-4 ದಶಕಗಳ ಹಿಂದೆ ಕೇವಲ ಸುಮಾರು 500 ರಿಂದ 600 ವಿದ್ಯಾರ್ಥಿಗಳಿದ್ದ ಈ ಕಾಲೇಜು ಇಂದು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಸುಮಾರು 6 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಕೇವಲ ಉದ್ಯೋಗಿಗಳಾಗದೇ ಮತ್ತೊಬ್ಬರಿಗೆ ಕೆಲಸ ನೀಡುವ ಉದ್ಯಮಪತಿಗಳಾಗಬೇಕು .ಸರ್ಕಾರ ಅನೇಕ ಪ್ರೋತ್ಸಾಹಕ ಯೋಜನೆಗಳ ಪ್ರಯೋಜನ ಪಡೆಯಬೇಕು. ಅಕ್ಟೋಬರ್ 15 ರಿಂದ ತಮ್ಮ ನಿರಾಣಿ ಸಮೂಹ ಸಂಸ್ಥೆಗಳ ಉದ್ಯಮ ಘಟಕಗಳು ಪುನರಾರಂಭ ಮಾಡಲಿವೆ. ಕಾಲೇಜಿನ ವಿದ್ಯಾರ್ಥಿಗಳು ಅಲ್ಲಿಗೆ ಭೇಟಿ ನೀಡಿ ಸ್ಫೂರ್ತಿ ಪಡೆಯಲಿ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button