ಉತ್ತರ ಕನ್ನಡ

ಟ್ರಾಫಿಕ್ ರೂಲ್ಸ್ ಉಲ್ಲಂಘನೆ; ಪೊಲೀಸ್ ಇಲ್ಲದಿದ್ದರೂ ಮನೆಗೇ ನೊಟೀಸ್​

ಕಾರವಾರ : ಪೊಲೀಸರು ಎಷ್ಟೇ ಜಾಗೃತರಾಗಿದ್ದರೂ ಟ್ರಾಫಿಕ್ ನಿಯಮಗಳನ್ನು ಪಾಲಿಸದೆ ಓಡಾಡುವ ಜನರನ್ನು ತಪ್ಪಿಸೋಕೆ ಸಾಧ್ಯವಾಗುವುದಿಲ್ಲ. ಹಾಗಂತ ಎಷ್ಟೇ ಸಿಬ್ಬಂದಿ ಇದ್ರೂ ವಾಹನ ಸವಾರರನ್ನು ನಿಯಂತ್ರಣದಲ್ಲಿಡೋದು ಸುಲಭದ ಕೆಲಸವಲ್ಲ.ಹೀಗಾಗಿ ಉತ್ತರ ಕನ್ನಡ ಪೊಲೀಸ್ ಇಲಾಖೆ ಒಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.

ನಗರದಲ್ಲಿ ಉಂಟಾಗಿದ್ದ ಟ್ರಾಫಿಕ್ ಕಿರಿಕಿರಿಯನ್ನು ನಿಯಂತ್ರಿಸೋದಕ್ಕೆ ಪೊಲೀಸ್ ಇಲಾಖೆ ವಿನೂತನ ಪ್ಲಾನ್ ಮಾಡಿದೆ.ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಸಂಚಾರ ನಿರ್ವಹಣಾ ಕೇಂದ್ರವನ್ನು ಪ್ರಾರಂಭಿಸಿದೆ.ಬೆಂಗಳೂರು ನಗರ ಮಾದರಿಯ ರೀತಿಯಲ್ಲಿಯೇ ತಾಲೂಕಿನಲ್ಲೂ 360 ಡಿಗ್ರಿಯಲ್ಲಿ ತಿರುಗುವ ವೈರ್​ಲೆಸ್​ PTZ ಕ್ಯಾಮರಾಗಳನ್ನು ಅಳವಡಿಸಿದೆ.

ನಗರದಲ್ಲಿ ಪ್ರತಿನಿತ್ಯ ಹೆಚ್ಚು ವಾಹನದಟ್ಟಣೆ ಇರುವ ಸುಭಾಷ್ ವೃತ್ತ,ಸವಿತಾ ಸರ್ಕಲ್,ಶಿವಾಜಿ ಸರ್ಕಲ್ ಹಾಗೂ ಹೂವಿನ ಚೌಕದಲ್ಲಿ ಅತ್ಯಾಧುನಿಕ ಮಾದರಿಯ 4 ಹೆಚ್.ಡಿ.ಸಿಸಿಕ್ಯಾಮರಾಗಳನ್ನು ಹಾಕಲಾಗಿದೆ.ಇದರೊಂದಿಗೆ ಮೈಕ್ ವ್ಯವಸ್ಥೆ ಸಹ ಇದೆ.ಹೀಗಾಗಿ ಟ್ರಾಫಿಕ್ ನಿಯಮ ಉಲ್ಲಂಘಿಸುವ ವಾಹನಗಳನ್ನು ಸಿಸಿ ಕ್ಯಾಮರಾದಲ್ಲಿ ವೀಕ್ಷಿಸಿ ಕೂಡಲೇ ಮೈಕ್ ಮೂಲಕ ಸವಾರರಿಗೆ ಎಚ್ಚರಿಕೆಯನ್ನು ನೀಡಲಾಗುತ್ತದೆ.

ಹೆಲ್ಮೆಟ್ ಧರಿಸದೆ ಓಡಾಡುವ,ನೋ ಪಾರ್ಕಿಂಗ್‌ನಲ್ಲಿ ನಿಲ್ಲುವ ವಾಹನಗಳ ಫೋಟೋ ತೆಗೆಯಲಾಗುತ್ತದೆ.ನಂತರ ವಾಹನ ಮಾಲೀಕರ ಮನೆಗೆ ನೇರವಾಗಿ ನೋಟಿಸ್​ನ್ನು ಕಳುಹಿಸಲಾಗುತ್ತದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.

ಈಗಾಗಲೇ ನಗರಸಭೆ ವತಿಯಿಂದ 23 ಸಿಸಿಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅವುಗಳನ್ನು ಸಹ ಸಂಚಾರ ನಿರ್ವಹಣಾ ಕೇಂದ್ರದಿಂದಲೇ ವೀಕ್ಷಣೆ ಮಾಡಬಹುದಾಗಿದೆ.ಇದರಿಂದ ನಗರ ವ್ಯಾಪ್ತಿಯಲ್ಲಿ ನಡೆಯಬಹುದಾದ ಕಳ್ಳತನ, ದರೋಡೆಯಂತಹ ಅಪರಾಧ ಪ್ರಕರಣಗಳ ಪತ್ತೆಗೂ ಸಹ ಸಹಕಾರಿಯಾಗಲಿದೆ ಎಂದಿದ್ದಾರೆ.

ಜಿಲ್ಲಾ ಪೊಲೀಸ್​ ಇಲಾಖೆಯಿಂದ ಕೈಗೊಂಡಿರುವ ಸಿಸಿ ಕ್ಯಾಮರಾ ವ್ಯವಸ್ಥೆ ಉತ್ತಮವಾಗಿದೆ.ಇದರಿಂದ ಸಾರ್ವಜನಿಕರು ಟ್ರಾಫಿಕ್ ನಿಯಮಗಳನ್ನು ಪಾಲಿಸುವಂತೆ ಮಾಡಲು ಅನುಕೂಲವಾಗಲಿದೆ.ಮುಂದಿನ ದಿನಗಳಲ್ಲಿ ಜಿಲ್ಲೆಯ ಇತರೆ ತಾಲೂಕುಗಳಲ್ಲಿಯೂ ಇದೇ ರೀತಿಯ ವ್ಯವಸ್ಥೆಯನ್ನು ಮಾಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button