ತಾಲಿಬಾನ್ ಸಂಪುಟದಲ್ಲಿ ಪಾಕ್ ಬೆಂಬಲಿತ ಹಖ್ಖಾನಿ; ಭಾರತದ ಆತಂಕಕ್ಕಿವೆ ಕಾರಣಗಳು

ಅಫ್ಘಾನಿಸ್ತಾನದಲ್ಲಿ ಮಂಗಳವಾರ ತಾಲಿಬಾನ್ನ ಹೊಸ ಮಧ್ಯಂತರ ಸರ್ಕಾರ ರಚನೆಯಾಗಿದೆ. ಸಚಿವ ಸಂಪುಟದಲ್ಲಿ ಗೃಹಸಚಿವನಾಗಿರುವ ಸಿರಾಜುದ್ದೀನ್ ಹಖ್ಖಾನಿ ಸೇರಿದಂತೆ ಹಖ್ಖಾನಿ ಉಗ್ರ ಗುಂಪಿನ ಇಬ್ಬರನ್ನು ಸೇರಿಸುವಲ್ಲಿ ಪಾಕ್ ಕೈವಾಡವಿರುವುದು ಸ್ಪಷ್ಟವಾಗಿದ್ದು, ಇದು ಭಾರತದ ಕಳವಳಕ್ಕೆ ಕಾರಣವಾಗಿದೆ.
ಸಿರಾಜುದ್ದೀನ್ ಹಖ್ಖಾನಿ, ಪಾಕಿಸ್ತಾನದ ಸಂಪರ್ಕವಿರುವ ಹಖ್ಖಾನಿ ನೆಟ್ವರ್ಕ್ನ ಸ್ಥಾಪಕ ಜಲಾಲುದ್ದೀನ್ ಹಖ್ಖಾನಿಯ ಪುತ್ರನಾಗಿದ್ದು, ಭಯೋತ್ಪಾದನೆಗಾಗಿ ಎಫ್ಬಿಐನ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದಾನೆ. ಆತನ ಚಿಕ್ಕಪ್ಪ ಖಲೀಲ್ ಹಖ್ಖಾನಿಗೆ ಕೂಡ ಸಂಪುಟದಲ್ಲಿ ಜಾಗ ಸಿಕ್ಕಿದೆ.
ಕಳೆದ ವಾರಾಂತ್ಯದಲ್ಲಿ ಪಾಕಿಸ್ತಾನದ ಐಎಸ್ಐ ಮುಖ್ಯಸ್ಥರು ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದ ಬಳಿಕ ಘೋಷಣೆಯಾದ ತಾಲಿಬಾನ್ ಸರ್ಕಾರದಲ್ಲಿ ಪಾಕ್ ಪ್ರಭಾವವಿರುವುದು ಸ್ಪಷ್ಟ. ಹಖ್ಖಾನಿ ಗುಂಪಿನ ಇನ್ನೂ ಇಬ್ಬರ ಹೆಸರು ಸಂಪುಟ ಸಚಿವರ ಪಟ್ಟಿಯಲ್ಲಿ ಕೇಳಿಬಂದಿತ್ತು. ಇದಕ್ಕಿಂತಲೂ ದೊಡ್ಡ ಸುಳಿವೆಂದರೆ, ಇತ್ತೀಚಿನವರೆಗೂ ಕತಾರ್ನ ದೋಹಾದಲ್ಲಿದ್ದ ತಾಲಿಬಾನ್ನ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದರ್ ಹೆಸರು ಕಡೇ ಕ್ಷಣದಲ್ಲಿ ಬದಿಗೆ ಸರಿದು, ಪ್ರಧಾನಿ ಹುದ್ದೆಗೆ ತಾಲಿಬಾನ್ ನಾಯಕ, ವಿಶ್ವಸಂಸ್ಥೆಯಿಂದ ನಿಷೇಧಕ್ಕೊಳಗಾಗಿರುವ ಮುಲ್ಲಾ ಹಸನ್ ಅಖುಂದ್ ಬಂದಿದ್ದು.
ಬರದರ್ ಮತ್ತು ತಾಲಿಬಾನ್ನ ದೋಹಾ ಬಣದ ಮತ್ತೋರ್ವ ಅಬ್ದುಲ್ ಸಲಾಂ ಹನಫಿ ಉ ಪ ಪ್ರಧಾನಿಗಳಾಗಿದ್ದಾರೆ. ದೋಹಾ ಬಣದವನೇ ಆದ ಶೇರ್ ಅಬ್ಬಾಸ್ ಸ್ತಾನಿಕಜೇ ಉಪ ವಿದೇಶಾಂಗ ಸಚಿವನಾಗಿದ್ದಾನೆ. ತನ್ನ ದೋಹಾ ಬಣವನ್ನು ರಾಜಕೀಯವಾಗಿ ಮಾತ್ರ ಬಳಸಿಕೊಳ್ಳುವ ತಾಲಿಬಾನ್, ಸಂಪುಟದಲ್ಲಿ ಹೆಸರಿಗಷ್ಟೇ ಅದನ್ನು ಸೀಮಿತವಾಗಿಸಿದೆ ಎಂಬುದು ಪರಿಣತರ ವಿಶ್ಲೇಷಣೆ.
ತಾಲಿಬಾನ್ ಪ್ರಧಾನಿ ಮುಲ್ಲಾ ಹಸನ್ ಅಖುಂದ್ ಕಂದಹಾರ್ನವನು. 1990ರ ದಶಕದಲ್ಲಿನ ತಾಲಿಬಾನ್ ಆಳ್ವಿಕೆ ವೇಳೆ ಪ್ರಭಾವಿಯಾಗಿದ್ದ ಅಖುಂದ್, ತಾಲಿಬಾನ್ನ ಸಹ ಸಂಸ್ಥಾಪಕ ಮುಲ್ಲಾ ಉಮರ್ನ ನಿಕಟವರ್ತಿ.
ತಾಲಿಬಾನ್ ಸಂಪುಟದ 33 ಸಚಿವರಲ್ಲಿ ಪ್ರಧಾನಿ ಅಖುಂದ್, ಇಬ್ಬರೂ ಉಪ ಪ್ರಧಾನಿಗಳು, ಗೃಹಮಂತ್ರಿ, ರಕ್ಷಣಾ ಮಂತ್ರಿ ಮತ್ತು ವಿದೇಶಾಂಗ ಮಂತ್ರಿ 17 ಮಂದಿ ವಿಶ್ವಸಂಸ್ಥೆಯ ನಿಷೇಧಿತರ ಪಟ್ಟಿಯಲ್ಲಿರುವವರೇ.
ಸಿರಾಜುದ್ದೀನ್ ಮತ್ತು ಖಲೀಲ್ ಹಖ್ಖಾನಿ ಇವರಿಬ್ಬರೂ ಅಮೆರಿಕಾದ ವಾಂಟೆಡ್ ಪಟ್ಟಿಯಲ್ಲಿದ್ದು, ಸಿರಾಜುದ್ದೀನ್ ಹಖ್ಖಾನಿ ತಲೆಗೆ 10 ಮಿಲಿಯನ್ ಡಾಲರ್ ಘೋಷಿಸಲಾಗಿದೆ.
ಈಗ ಭಾರತಕ್ಕೆ ದೊಡ್ಡ ತಲೆನೋವಾಗಿರುವುದು ತಾಲಿಬಾನ್ ಸರ್ಕಾರದಲ್ಲಿ ಹಖ್ಖಾನಿಗಳ ಪಾತ್ರವಿರುವುದರ ಬಗ್ಗೆ.
2008ರಲ್ಲಿ ಕಾಬೂಲ್ನಲ್ಲಿ ಭಾರತೀಯ ರಾಯಭಾರ ಕಚೇರಿಯ ಮೇಲೆ ಬಾಂಬ್ ದಾಳಿ ನಡೆದಿತ್ತು. 58 ಮಂದಿ ಸಾವಿಗೆ ಕಾರಣವಾಗಿದ್ದ ಈ ದಾಳಿಯ ಹಿಂದೆ ಇದ್ದಿದ್ದು ಹಖ್ಖಾನಿ ಗುಂಪು. ಪಾಕಿಸ್ತಾನದ ಐಎಸ್ಐ ಪ್ರೇರಿತ ದಾಳಿ ಇದೆಂಬ ಆರೋಪವಿದ್ದು, ಪಾಕಿಸ್ತಾನ ಮಾತ್ರ ಅದನ್ನು ಒಪ್ಪಲು ತಯಾರಿಲ್ಲ.
ಅಮೆರಿಕಾ ಗುಪ್ತಚರ ಮುಖ್ಯಸ್ಥನೊಂದಿಗೆ ಧೋವಲ್ ಮಾತುಕತೆ:
ಪಾಕಿಸ್ತಾನದ ಪಾಲುದಾರಿಕೆ ಇರುವ ತಾಲಿಬಾನ್ ಸರ್ಕಾರ ಮತ್ತು ವಿಶ್ವಸಂಸ್ಥೆಯ ನಿಷೇಧಿತರ ಪಟ್ಟಿಯಲ್ಲಿರುವಾತನೇ ಅದರ ನಾಯಕನಾಗಿರುವ ಹಿನ್ನೆಲೆಯಲ್ಲಿ, ರಾಷ್ಟ್ರೀಯ ರಕ್ಷಣಾ ಸಲಹೆಗಾರ ಅಜಿತ್ ಧೊವಲ್ ಅಮೆರಿಕಾದ ಗುಪ್ತಚರ ಮುಖ್ಯಸ್ಥನೊಂದಿಗೆ ನಡೆಸಿರುವ ಮಾತುಕತೆ ಮಹತ್ವ ಪಡೆದಿದೆ.
ತಾಲಿಬಾನ್ ಸರ್ಕಾರ ರಚನೆಯಾದ ದಿನವೇ ಅಂದರೆ ಮಂಗಳವಾರ ನವದೆಹಲಿಯಲ್ಲಿ ಸಿಐಎ ಮುಖ್ಯಸ್ಥ ವಿಲಿಯಮ್ ಬರ್ನ್ಸ್ ಜೊತೆ ಮಾತುಕತೆ ನಡೆಸಿದರು. ಭಾರತದ ಕಳವಳಕ್ಕೆ ಕಾರಣವಾಗಿರುವ ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳು ಧೋವಲ್ ಮತ್ತು ಬರ್ನ್ಸ್ ಮಾತುಕತೆಯಲ್ಲಿ ಆದ್ಯತೆಯ ವಿಷಯವಾಗಿರುತ್ತದೆ.
ಭಾರತವನ್ನು ಗುರಿಯಾಗಿಸಿಕೊಂಡು ಉಗ್ರರು ತನ್ನ ನೆಲದಿಂದ ಕಾರ್ಯಾಚರಣೆ ನಡೆಸುವುದಕ್ಕೆ ತಾಲಿಬಾನ್ ಅವಕಾಶ ಕೊಡಲಾರದು ಎಂಬ ವಿಶ್ವಾಸವನ್ನು ಭಾರತ ವ್ಯಕ್ತಪಡಿಸಿದೆ. ಜಮ್ಮು ಕಾಶ್ಮೀರದಲ್ಲಿ ತಾಲಿಬಾನ್ ಬಿಕ್ಕಟ್ಟು ಸೃಷ್ಟಿಸಬಹುದೆಂಬ ಆತಂಕವು ಇದೀಗ ಕಾಡುವ ವಿಚಾರವಾಗಿ ಎದುರಲ್ಲಿದೆ.
