ಭಟ್ಕಳ: ಬಡ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಣೆ

ಕಾರವಾರ : ಭಟ್ಕಳದ ಶ್ರೀ ವೆಂಕಟೇಶ್ವರ ವಿದ್ಯಾವರ್ಧಕ ಸಂಘದ ವತಿಯಿಂದ ಸರಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ಪಿ.ಯು.ಸಿ. ಪಠ್ಯಪುಸ್ತಕ ವಿತರಣಾ ಕಾರ್ಯಕ್ರಮ ಇಲ್ಲಿನ ಆಸರಕೇರಿಯ ಗುರುಮಠದ ನಾಮಧಾರಿ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ನಾಮಧಾರಿ ಸಮಾಜದ ಗುರುಮಠದ ಅಧ್ಯಕ್ಷ ಕೃಷ್ಣ ನಾಯ್ಕ ಉದ್ಘಾಟಿಸಿದರು.ನಂತರ ಅವರು ಮಾತನಾಡಿ,ಕಳೆದ ಎಂಟು ವರ್ಷಗಳಿಂದ ನಾಮಧಾರಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾವರ್ಧಕ ಸಂಘವು ಉಚಿತ ಪಠ್ಯಪುಸ್ತಕ ನೀಡುತ್ತಿದೆ.ಇವರಿಂದ ಪಡೆದ ಪುಸ್ತಕವನ್ನು ವಿದ್ಯಾರ್ಥಿಗಳು ಸರಿಯಾಗಿ ಉಪಯೋಗಿಸಿಕೊಂಡು ವಿದ್ಯಾಭ್ಯಾಸ ಮಾಡಿ,ಮುಂದೆ ಪರೀಕ್ಷೆಯಲ್ಲಿ ಸಾಧನೆ ಮಾಡಿ ಉನ್ನತ ಶಿಕ್ಷಣ ಹೊಂದಬೇಕು ಎಂದರಲ್ಲದೇ,ಸಮಾಜದಿಂದ ಪಡೆದ ಋಣವನ್ನು ತಾವು ಉತ್ತುಂಗ ಸ್ಥಾನಕ್ಕೇರಿದಾಗ ಅದನ್ನು ತೀರಿಸುವ ಗುಣ ಹೊಂದುವವರಾಗಬೇಕು.ವಿದ್ಯಾರ್ಥಿಗಳು ಇಂದು ತಮ್ಮ ಕಲಿಕೆಯೊಂದಿಗೆ ಸಂಸ್ಕಾರವನ್ನು ಪಡೆದು ಸಮಾಜಕ್ಕೆ ಮಾದರಿಯಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ರೋಟರಿ ಹಾಗೂ ಸ್ಪಂದನ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ನಾಯ್ಕ ಅವರು ಮಾತನಾಡಿ,ಇಂದು ವಿದ್ಯಾರ್ಥಿಗಳು ವಿಧೇಯತೆಯೊಂದಿಗೆ ಗುರು ಹಿರಿಯರಿಗೆ ಗೌರವ ನೀಡುವ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಧ್ಯಕ್ಷ ಮನಮೋಹನ ನಾಯ್ಕ ಅವರು ಮಾತನಾಡಿ,ಪಿ.ಯು.ಸಿ.ಹಂತದ ಶಿಕ್ಷಣ ವಿದ್ಯಾರ್ಥಿಗಳ ಜೀವಮಾನದಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು,ಈ ಸಮಯದಲ್ಲಿ ಉತ್ತಮ ವಿದ್ಯಾಭ್ಯಾಸ ಮಾಡಿ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ವೆಂಕಟೇಶ್ವರ ವಿದ್ಯಾವರ್ಧಕ ಸೇವಾ ಸಂಸ್ಥೆಯ ಅಧ್ಯಕ್ಷ ಕೆ.ಆರ್.ನಾಯ್ಕ ಅವರು ಮಾತನಾಡಿ,ನಮ್ಮ ಸಂಸ್ಥೆಯಿಂದ ಮೂರು ಸಾವಿರಕ್ಕೂ ಅಧಿಕ ವಿಧ್ಯಾರ್ಥಿಗಳಿಗೆ ಪಠ್ಯಪುಸ್ತಕ ನೀಡಿದ್ದು,ಇದಕ್ಕೆ ದಾನಿಗಳು ಸಹ ಸಹಕಾರ ನೀಡಿದ್ದಾರೆ ಎಂದರು.ಉಪನ್ಯಾಸಕ ರವಿ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು.ಕಾರ್ಯಕ್ರಮದಲ್ಲಿ ಪಿ.ಯು.ಸಿ.ಪ್ರಥಮ,ದ್ವಿತೀಯ ಸೇರಿದಂತೆ ಎರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಸಂಸ್ಥೆಯ ನೂತನ ಸದಸ್ಯರಾಗಿ ನೇಮಕಗೊಂಡ ಜಗದೀಶ ನಾಯ್ಕರಿಗೆ ಹೂಗುಚ್ಛ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಪಾಂಡುರಂಗ ನಾಯ್ಕ,ಶ್ರೀಧರ ನಾಯ್ಕ ಇನ್ನಿತರರು ಉಪಸ್ಥಿತರಿದ್ದರು.




