Breaking NewsLatestರಾಜಕೀಯರಾಜ್ಯ

ಜೋಶಿ ಪುತ್ರಿ ಆರತಕ್ಷತೆ; ದೆಹಲಿಗೆ ಸಿಎಂ, ಸಚಿವರು ಮತ್ತು ಕೇಸರಿ ನಾಯಕರ ದಂಡು

ಬೆಂಗಳೂರು: ಕೇಂದ್ರ ಸಚಿವರನ್ನು ಭೇಟಿ ಮಾಡುವ ನೆಪದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೂರನೇ ಬಾರಿ ನಡೆಯುತ್ತಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮಗಳ  ಆರತಕ್ಷತೆಯಲ್ಲಿ ಭಾಗವಹಿಸಲು ನವದೆಹಲಿಗೆ ಮಂಗಳವಾರ ಪ್ರಯಾಣ ಬೆಳೆಸಿದ್ದಾರೆ. ಸಿಎಂ ಮಾತ್ರ ಅಲ್ಲದೇ ತಮ್ಮ ತಮ್ಮ ಇಲಾಖೆಗಳ ಅಧಿಕೃತ ಕೆಲಸಗಳ ನೆಪದಲ್ಲಿ ಹಲವು ಸಚಿವರ ದಂಡು ಕೂಡ ದೆಹಲಿಗೆ ತೆರಳಲಿದೆ.

ವಿವಾಹ ಮಹೋತ್ಸವದ ನಂತರ ಸಚಿವ ಪ್ರಹ್ಲಾದ್ ಜೋಷಿ ಮಗಳ ಆರತಕ್ಷತೆ ಕಾರ್ಯಕ್ರಮ ಮೊದಲ ಬಾರಿ  ಹುಬ್ಬಳ್ಳಿಯಲ್ಲಿ ನಡೆದಿತ್ತು. ಆರತಕ್ಷತೆಯನ್ನು ಎರಡನೇ ಬಾರಿ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಈಗ ಮೂರನೇ ಬಾರಿ ದೆಹಲಿಯಲ್ಲಿ ಮಂಗಳವಾರ ಸಂಜೆ 7 ಗಂಟೆಗೆ ಆಕ್ಬರ್ ರಸ್ತೆಯ ಜೋಷಿ ನಿವಾಸದಲ್ಲಿ ಆರತಕ್ಷತೆ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ,ಅಮಿತ್ ಶಾ ಸೇರಿದಂತೆ ಹಲವು ಕೇಂದ್ರ ಸಚಿವರು ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಪಕ್ಷದ  ಹಿರಿಯ ನಾಯಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಹುಬ್ಬಳ್ಳಿಯಲ್ಲಿ ನಡೆದ ಜೋಷಿ ಪುತ್ರಿಯ ವಿವಾಹ ಮಹೋತ್ಸವದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರ ಮತ್ತು ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳ ಸಚಿವರ ದಂಡು ಭಾಗವಹಿಸಿತ್ತು. ತದನಂತರ ಹುಬ್ಬಲ್ಳಿ ಹಾಗೂ ಬೆಂಗಳೂರಿನಲ್ಲಿ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲೂ ಬಿಜಪಿಯ ಘಟಾನುಘಟಿ ನಾಯಕರು ಸೇರಿದಂತೆ ಸಚಿವರು, ಶಾಸಕರು, ನಿಗಮ ಮಂಡಳಿಗಳ ಅಧ್ಯಕ್ಷರು ಭಾಗವಹಿಸಿದ್ದರು.

ಈಗ ದೆಹಲಿಯಲ್ಲಿ ನಡೆಯಲಿರುವ ಪ್ರಹ್ಲಾದ್ ಜೋಷಿ ಪುತ್ರಿಯ ಆರತಕ್ಷತೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೂರನೇ ಬಾರಿಯೂ ಭಾಗವಹಿಸಲು ಈಗಾಗಲೇ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ.

ಸಚಿವರಾದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಗೋವಿಂದ ಕಾರಜೋಳ, ಶ್ರೀರಾಮುಲು,ವಿ.ಸೋಮಣ್ಣ, ಮುರುಗೇಶ್ ನಿರಾಣಿ,ಸಿ.ಸಿ.ಪಾಟೀಲ್   
ಶಶಿಕಲಾ ಜೊಲ್ಲೆ ಸೇರಿದಂತೆ 17ಕ್ಕೂ ಹೆಚ್ಚು ಸಚಿವರು, ಮಾಜಿ ಸಚಿವರಾದ ಜಗದೀಶ್ ಶೆಟ್ಟರ್, ಈ ಹಿಂದೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್ , ಜಾರಿಕಿಹೊಳಿ ಸೋದರರು,ಖಾತೆ ಬದಲಾವಣೆಗೆ ಯತ್ನಿಸಿದ್ದ ಆನಂದ್ ಸಿಂಗ್, ಎಂ.ಟಿ.ಬಿ ನಾಗರಾಜ್, 20ಕ್ಕೂ ಹೆಚ್ಚು ನಿಗಮ-ಮಂಡಳಿಗಳ ಅಧ್ಯಕ್ಷರು ದೆಹಲಿಗೆ ತೆರಳುವ ನಿರೀಕ್ಷೆ ಇದೆ.

ದೆಹಲಿಗೆ ತೆರಳುತ್ತಿರುವವರ ಪೈಕಿ ಒಂದಿಬ್ಬರನ್ನು ಹೊರತುಪಡಿಸಿ ಬಹುತೇಕರು ಈಗಾಗಲೇ ಪ್ರಹ್ಲಾದ್ ಜೋಷಿ ಪುತ್ರಿಯ ವಿವಾಹ ಮತ್ತು ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿದವರೇ ಆಗಿದ್ದಾರೆ.

ಬೊಮ್ಮಾಯಿ ಸಂಪುಟದಲ್ಲಿ ಇನ್ನೂ ನಾಲ್ಕು ಸ್ಥಾನಗಳು ಬಾಕಿ ಇವೆ. ಹಲವು ನಿಗಮ-ಮಂಡಳಿಗಳ ಅಧ್ಯಕ್ಷರ ಬದಲಾವಣೆ ಸಾಧ್ಯತೆ ಇದೆ. ಹೀಗಾಗಿ ಆರತಕ್ಷತೆ ಸಂದರ್ಭದಲ್ಲಿ ಪಕ್ಷ ವರಿಷ್ಠರು ಮತ್ತು ಸಚಿವರ ಸಮಾಗಮ ಸಂದರ್ಭದಲ್ಲಿ ರಾಜಕೀಯವಾಗಿ ತಮಗೇನಾದರೂ ಲಾಭವಾಗಬಹುದು ಎಂಬುದು ದೆಹಲಿಗೆ ಹೊರಟು ನಿಂತವರ ಆಸೆ. ಆದರೆ ಸಿಎಂ ಸೇರಿದಂತೆ ಹಲವು ಸಚಿವರು ಸರ್ಕಾರದ ಕೆಲಸದ ನೆಪದಲ್ಲಿ ದೆಹಲಿಗೆ ತೆರಳಿರುವುದು ಜನರ ತೆರಿಗೆ ಹಣದ ಪೋಲು ಎಂಬ ಟೀಕೆಗಳು ವ್ಯಕ್ತವಾಗಿವೆ.

Spread the love

Related Articles

Leave a Reply

Your email address will not be published. Required fields are marked *

Back to top button