ಪ್ರಚಾರಕ್ಕೆ ಚಕ್ಕರ್, ಕ್ರೆಡಿಟ್ಗೆ ಹಾಜರ್; ಬಿಜೆಪಿ ಗೆಲುವಿನಲ್ಲಿ ಯಾರಿಗೆ ಪಾಲು?

ವರದಿ: ಮಲ್ಲಿಕ್ ಬೆಳಗಲಿ
ಬೆಳಗಾವಿ: ತೀವ್ರ ಕುತೂಹಲ ಕೆರಳಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷ ಬಿಜೆಪಿ 36 ವಾರ್ಡ್ ಗಳಲ್ಲಿ ಗೆಲ್ಲುವ ಮೂಲಕ ಸ್ಪಷ್ಟವಾಗಿ ಮ್ಯಾಜಿಕ್ ನಂಬರ್ ಪಡೆದು ಪಾಲಿಕೆ ಮೇಲೆ ಬಿಜೆಪಿ ಬಾವುಟ ಹಾರಿಸಲು ತಯಾರಾಗಿದೆ ಸದ್ಯ ಬಿಜೆಪಿ ಗೆಲುವಿಗೆ ಪ್ರಮುಖ ಕಾರಣ ಯಾರು ಎಂದು ನೋಡಲು ಹೋದರೆ ನಾವೇ ಗ್ರೌಂಡ್ ವರ್ಕ್ ಮಾಡಿ ಗೆಲ್ಲಿಸಿದೆವು ಎನ್ನುವ ನಾಯಕರು ಕ್ರೆಡಿಟ್ ಪಡೆಯಲು ಸಾಲು ಸಾಲಾಗಿ ನಿಂತಿದ್ದಾರೆ
ಗ್ರೌಂಡ್ ವರ್ಕ್ಗೆ ಬರಲಿಲ್ಲ ಜೊಲ್ಲೆ, ಸವದಿ, ಕತ್ತಿ, ಕಾರಜೋಳ, ಅಂಗಡಿ
ನಗರ ಪಾಲಿಕೆ ಚುನಾವಣೆ ಘೋಷಣೆ ನಂತರ ತಳ ಮಟ್ಟದಲ್ಲಿ ಕಾರ್ಯ ನಿರ್ವಹಿಸಲು ಬೆಳಗಾವಿ ಜಿಲ್ಲೆಯ ಪ್ರಮುಖ ನಾಯಕರು ಬರಲೇ ಇಲ್ಲ. ಯುಡಿಯೂರಪ್ಪ ನಿರ್ಗಮನ ನಂತರ ಎದುರಿಸಿದ ಮೊದಲ ಚುನಾವಣೆಯಲ್ಲಿ ಮಂತ್ರಿಗಿರಿ ಕೈತಪ್ಪಿದ ಕೋಪ ಕೂಡ ಬೆಳಗಾವಿ ನಾಯಕರಲ್ಲಿ ಇತ್ತು. ಪರೋಕ್ಷವಾಗಿ ಆದ್ರೂ ತಮ್ಮ ಮಂತ್ರಿಗಿರಿ ಕೈತಪ್ಪಿದಕ್ಕೆ ಪಾಲಿಕೆ ಚುನಾವಣೆ ಪಾಠವಾಗಲಿ ಎಂದು ಅಷ್ಟಾಗಿ ಪ್ರಮುಖ ನಾಯಕರು ಕಾಣಿಸಿಕೊಳ್ಳಲಿಲ್ಲ. ಸಚಿವೆ ಶಶಿಕಲಾ ಜೊಲ್ಲೆ ಉಸ್ತುವಾರಿ ಕಾರಜೋಳ ಅವರಿಗೆ ಬೆಳಗಾವಿ ನಗರದಲ್ಲಿ ಯಾವುದೇ ಹಿಂಬಾಲಕರಗಲಿ ಅಥವಾ ಪ್ರತ್ಯೇಕ ಕಾರ್ಯಪಡೆ ಆಗಲಿ ಇಲ್ಲ. ಇನ್ನು ಉಮೇಶ್ ಕತ್ತಿ ಕೊನೆ ಘಳಿಗೆಗೆ ಮಾತ್ರ ಪ್ರಚಾರಕ್ಕೆ ಬಂದಿದ್ದು ಯಾವುದೇ ಉತ್ಸಾಹ ತೋರದೆ ಭಾಗವಹಿಸಿದ್ದರು. ಸಚಿವಗಿರಿ, ಉಪಮುಖ್ಯಮಂತ್ರಿ ತಪ್ಪಿದ ನಂತರ ಲಕ್ಷ್ಮಣ ಸವದಿ ಮೊದಲಿನ ಪೈರ್ ಬ್ರಾಂಡ್ ಉಳಿಸಿಕೊಂಡಿಲ್ಲ. ಇನ್ನು ಸಂಸದೆ ಮಂಗಳಾ ಅಂಗಡಿ ಕೂಡ ರಾಜಕೀಯ ಇತ್ತೀಚಿಗೆ ಆರಂಭಿಸಿರುವುದರಿಂದ ಪ್ರಚಾರಕ್ಕೆ ಮಾತ್ರ ಸೀಮಿತವಾಗಿದ್ದಾರೆ.
ಇದೆಲ್ಲದರ ಮಧ್ಯೆ, ಈಗ ಬಿಜೆಪಿ ಬಹುಮತ ಪಡೆದಿದ್ದು ಸ್ವತಃ ರಾಜ್ಯದ ಪ್ರಮುಖ ನಾಯಕರೇ ಅಚ್ಚರಿಪಡುತ್ತ ಖುಷಿ ಪಡುತ್ತಿದ್ದಾರೆ. ಈ ಗೆಲುವು ಮುಖ್ಯಮಂತ್ರಿಗಳ ಸೀಟ್ ಕೂಡ ಗಟ್ಟಿ ಮಾಡಿದ್ದು ಯಾರೇ ಬಂದರೂ ಯಾರೇ ಹೋದರೂ ಬಿಜೆಪಿ ಬ್ರಾಂಡ್ನಿಂದಲೇ ಗೆಲುವು ಎನ್ನುವ ಸಂದೇಶ ರವಾಣೆಯಾಗಿದೆ.
ಸತೀಶ್ ರೆಡ್ಡಿ, ಅಭಯ್ ಪಾಟೀಲ್, ಅನಿಲ್ ಬೆನಕೆ ವರ್ಕೌಟ್ ಸಕ್ಸಸ್
ಚುನಾವಣೆಗೆ ಹಲವು ದಿನಗಳ ಮುನ್ನ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ತಮ್ಮ ಪಟಾಲಂ ಜೊತೆ ಬೆಳಗಾವಿ ನಗರಕ್ಕೆ ಎಂಟ್ರಿ ಕೊಟ್ಟಿದ್ದರು. ಈ ವೇಳೆ ಸ್ಥಳೀಯ ಇಬ್ಬರು ಶಾಸಕರಾದ ಅನಿಲ್ ಬೆನಕೆ ಹಾಗೂ ಅಭಯ್ ಪಾಟೀಲ್ ನೇತೃತ್ವ ಪರೋಕ್ಷವಾಗಿ ಒಲಿದು ಬಂದಿತ್ತು. ಈ ಹಿಂದೆಯೇ ಬಿಜೆಪಿ ಪಕ್ಷ ಚಿಹ್ನೆಯೊಂದಿಗೆ ಸ್ಪರ್ದಿಸುವ ಇಂಗಿತ ಇದ್ದುದ್ದರಿಂದ ಆಕಾಂಕ್ಷಿಗಳ ಪಟ್ಟಿ ಮೊದಲೇ ತಲುಪಿತ್ತು ಎನ್ನಲಾಗುತ್ತಿದೆ. ಯಾವುದೇ ವಿಳಂಬ ನೀತಿ ಅನುಸರಿಸದೆ ಟಿಕೆಟ್ ಹಂಚಿಕೆ ಮಾಡಿ, ಬಿಜೆಪಿಯ ಮೋರ್ಚಾದ ಅಧ್ಯಕ್ಷರುಗಳು, ಕಾರ್ಯಕರ್ತರು ಸಂಘ ಪರಿವಾರದ ಮುಖಂಡರ ಮುಂದೆ ಬಿಟ್ಟು ಮತ ಬೇಟೆ ನಡೆಸಿದರು.
ಈ ವೇಳೆ ಪ್ರಣಾಳಿಕೆ ಗದ್ದಲವನ್ನು ಕೂಡ ಹತ್ತಿಕ್ಕುವಲ್ಲಿ ಯಶಸ್ವಿಯಾದ ಶಾಸಕರು ಕೊನೆ ಹಂತದವರೆಗೆ ಮತ ಬೇಟೆ ನಡೆಸಿದರು. ಮುನಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ ಅವರನ್ನು ಸಹಿತ ಪ್ರಚಾರಕ್ಕೆ ತರುವಲ್ಲಿ ಯಶಸ್ವಿಯಾಗಿ ತಮ್ಮ ಕಾರ್ಯವನ್ನ ಬಿಜೆಪಿಯ ಹಿಂದುತ್ವ, ಮೋದಿ, ಅಜೆಂಡಾದೊಂದಿಗೆ ಮತ್ತೊಮ್ಮೆ ಗೆದ್ದಿರುವುದು ಸಾಬೀತಾಗಿದೆ. ಅಲ್ಲದೆ ಮಗ್ಗಲು ಮುಳ್ಳಾಗಿದ್ದ MES ಜೊತೆ ಯಾವುದೇ ಜಿದ್ದು ಮಾಡದೆ MESನ ಹಿರಿಯ ನಾಯಕರನ್ನ ಪಕ್ಷಕ್ಕೆ ಕೂಡ ಸೇರ್ಪಡೆಗೊಳಸಿದ್ದರು. ಇವೆಲ್ಲಾ ಅಂಶಗಳೇ ಗೆಲುವಿಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
ಸದ್ಯ ಸತೀಶ್ ರೆಡ್ಡಿ ಉಸ್ತುವಾರಿಯಲ್ಲಿ ನಿರೀಕ್ಷೆಗೆ ಮೀರಿ ಗೆಲುವು ಸಾದಿಸಿದ್ದು ಈಗ ಬೆಳಗಾವಿ ಜಿಲ್ಲೆಯ ನಾಯಕರು ಇದರ ಕ್ರೆಡಿಟ್ ಪಡೆಯಲು ನಾ ಮುಂದು ತಾ ಮುಂದು ಎನ್ನುತ್ತಿದ್ದಾರೆ.




