ಹುಬ್ಬಳ್ಳಿ – ಧಾರವಾಡ: ಮತ ಎಣಿಕೆ ಕೇಂದ್ರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ

ಧಾರವಾಡ: ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆಯು ನಾಳೆ ಮುಂಜಾನೆ 8 ಗಂಟೆಯಿಂದ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಒಟ್ಟು 420 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದು, ಎಲ್ಲ ಅಭ್ಯರ್ಥಿಗಳ ಚುನಾವಣೆ ಪಲಿತಾಂಶ ನಾಳೆ ಹೋರಬೀಳಲಿದೆ.
ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆಯ 82 ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಒಟ್ಟು 420 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. 842 ಮತ ಕೇಂದ್ರಗಳಲ್ಲಿ ಮತದಾನ ನಡೆದಿದೆ.
ಕೃಷಿ ವಿವಿ ಆವರಣದ 6 ಕೇಂದ್ರಗಳಲ್ಲಿ ಮತ ಎಣಿಕೆ:
ಧಾರವಾಡ ಕೃಷಿ ವಿಶ್ವ ವಿದ್ಯಾಲಯದಲ್ಲಿ ಪಾಲಿಕೆ ಚುನಾವಣೆ ಮತ ಎಣಿಕೆ ನಡೆಯಲಿದೆ. ಕೃಷಿ ವಿವಿಯ 6 ಕೇಂದ್ರಗಳಲ್ಲಿ ಎಣಿಕೆ ಕಾರ್ಯ ನಡೆಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.
ವಾರ್ಡ್ ನಂ 1ರಿಂದ 25ವರೆಗೆ ಕೃಷಿ ಶೃಂಗ ಸಭಾಂಗಣದಲ್ಲಿ ಎರಡು ಸುತ್ತಿನಲ್ಲಿ ಮತ ಎಣಿಕೆ, ವಾರ್ಡ್ ನಂ 26 ರಿಂದ 35 ರವರೆಗೆ ಎರಡು ಸುತ್ತಿನಲ್ಲಿ ಕೃಷಿ ವಿವಿ ಕ್ಲಾಸ್ ರೂಮ್ 2 ರಲ್ಲಿ,
ವಾರ್ಡ್ ನಂ 36 ರಿಂದ 40 ಕೃಷಿ ವಿವಿ ಕ್ಲಾಸ್ ರೂಮ್ 2 ರಲ್ಲಿ ಎರಡು ಸುತ್ತಿನಲ್ಲಿ, ವಾರ್ಡ್ ನಂ 41ರಿಂದ 51 ರವರೆಗೆ ಕೃಷಿ ವಿವಿ ಹಾಲ್ ನಂ 23 ನೆಲ ಮಹಡಿಯಲ್ಲಿ ಎರಡು ಸುತ್ತಿನಲಿ, ವಾರ್ಡ್ ನಂ 52 ರಿಂದ 62ರವರೆಗೆ ಕೃಷಿ ವಿವಿ ಹಾಲ್ 118 ರಲ್ಲಿ ಎರಡು ಸುತ್ತುಗಳಲ್ಲಿ ಮತ ಏಣಿಕೆ, ಹಾಗೂ ವಾರ್ಡ್ ನಂ 62 ರಿಂದ 82ರ ವರೆಗೆ ಕೃಷಿ ವಿವಿಯ ಹಾಲ್ ನಂ 115ರಲ್ಲಿ ಎರಡು ಸುತ್ತಿನಲ್ಲಿ ಮತ ಎಣಿಕೆ ನಡೆಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.
ಮತ ಎಣಿಕೆಗೆ 140 ಸಿಬ್ಬಂದಿ, ಮೂರು ಟೇಬಲ್:
ನಾಳೆಯ ಮತ ಎಣಿಗೆಗಾಗಿ ಒಟ್ಟು 140 ಜನ ಸಿಬ್ಬಂದಿಗಳನ್ನು ತರಬೇತಿ ನೀಡಿ, ಸಿದ್ದಗೊಳಿಸಲಾಗಿದೆ. ಪ್ರತಿ ಚುನಾವಣಾಧಿಕಾರಿಗೆ ಮತ ಎಣಿಕೆಗಾಗಿ ಮೂರು ಟೆಬಲ್ ಗಳನ್ನು ಮಾಡಲಾಗಿದೆ. ಒಟ್ಟು 16 ಜನ ಚುನಾವಣಾಧಿಕಾರಿಗಳಿದ್ದು ಪ್ರತಿಯೊಬ್ಬರಿಗೆ ಮೂರು ಟೇಬಲ್ ನೀಡಲಾಗಿದ್ದು, ಪ್ರತಿ ಚುನಾವಣಾಧಿಕಾರಿ ಅಧೀನದಲ್ಲಿ ಏಕಕಾಲಕ್ಕೆ ಮೂರು ವಾರ್ಡ್ ಗಳ ಮತ ಎಣಿಕೆ ಕಾರ್ಯ ಆರಂಭವಾಗುತ್ತದೆ. 16 ಚುನಾವಣಾಧಿಕಾರಿಗಳು ಸೇರಿ ಒಟ್ಟು 48 ವಾರ್ಡ್ಗಳ ಮತ ಎಣಿಕೆ ಕಾರ್ಯ ಏಕಕಾಲಕ್ಕೆ ಆರಂಭವಾಗುತ್ತದೆ. ಹೀಗೆ ಆಯಾ ವಾರ್ಡ್ ಮತ ಎಣಿಕೆ ಪೂರ್ಣಗೊಂಡ ನಂತರ, ಮತ್ತೊಂದು ವಾರ್ಡ್ನ ಮತ ಎಣಿಕೆ ಆರಂಭಿಸುತ್ತಾರೆ. ಮತ್ತು ಚುನಾವಣಾಧಿಕಾರಿಗಳು ತಮ್ಮ ವಾರ್ಡಗಳ ಫಲಿತಾಂಶವನ್ನು ಘೋಷಿಸುತ್ತಾರೆ.
ಮತ ಎಣಿಕೆ ಕೇಂದ್ರ ಸೇರಿ 3 ತಾಲೂಕುಗಳಲ್ಲಿ 144 ಸೆಕ್ಷನ್ ಜಾರಿ:
ನಾಳೆ ಮುಂಜಾನೇ 8 ಗಂಟೆಯಿಂದ ಪಾಲಿಕೆ ಮತ ಎಣಿಕೆ ಕಾರ್ಯ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಮತ ಏಣಿಕೆ ಕೇಂದ್ರ ಸುತ್ತಲೂ 144 ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ. ಜೊತೆಗೆ ಜಿಲ್ಲೆಯ ಮೂರು ತಾಲೂಕುಗಳಲ್ಲಿಯು ನಿಷೇಧಾಜ್ಞೆ ಜಾರಿಯಲ್ಲಿದ್ದು, ಧಾರವಾಡ ತಾಲೂಕು, ಹುಬ್ಬಳ್ಳಿ ತಾಲೂಕು ಹಾಗೂ ಹುಬ್ಬಳ್ಳಿ ನಗರ ತಾಲೂಕಿನಲ್ಲಿ ಮತ ಏಣಿಕೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಭಾನುವಾರ ಸಂಜೆ 6 ರಿಂದ ಸೋಮವಾರ ಸಂಜೆ ಏಳು ಗಂಟೆಯವರೆಗೆ ಮದ್ಯಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ.
ಮತ ಎಣಿಕೆ ಕೇಂದ್ರದ ಸುತ್ತಲೂ 650 ಪೊಲೀಸ್ ಅಧಿಕಾರಿಗಳ ನಿಯೋಜನೆ:
ಮತ ಎಣಿಕೆ ಕೇಂದ್ರದ ಬಳಿ ಯಾವುದೆ ಅಹಿತಕರ ಘಟನೆ, ಮುಂಜಾಗ್ರತಾ ಕ್ರಮವಾಗಿ ಒಟ್ಟು 650 ಜನ ಪೊಲೀಸ್ ಅಧಿಕಾರಿಗಳನ್ನು ಭದ್ರತೆಗಾಗಿ ಬಳಸಿಕೊಳ್ಳಲಾಗಿದೆ. 12 ಇನ್ಸ್ಪೆಕ್ಟರ್, 20 ಸಬ್ ಇನ್ಸ್ಪೆಕ್ಟರ್, 43 ಎ ಎಸ್ ಐ, 4 ಕೆಎಸ್ ಆರ್ ಪಿ ತುಕಡಿ, 3 ಡಿಆರ್ ತುಕುಡ ನಿಯೋಜನೆ ಮಾಡಲಾಗಿದ್ದು, ಇವರ ಜೊತೆಗೆ ಇಬ್ಬರು ಡಿಸಿಪಿ ಹಾಗೂ ಹು-ಧಾ ನಗರ ಪೊಲೀಸ್ ಆಯುಕ್ತರಾದ ಲಾಬುರಾಮ್ ಅವರು ಸ್ಥಳದಲ್ಲಿ ಇರಲಿದ್ದಾರೆ.



