
ನವದೆಹಲಿ: ಭಾರತದಲ್ಲಿ ಅತ್ಯಾಧುನಿಕ ಸೈನಿಕ ತರಬೇತಿಯನ್ನು ಪಡೆದು, ಪ್ರಬುದ್ಧ ಇಂಗ್ಲಿಷ್ ಶಿಕ್ಷಣ ಪಡೆದ ಶೇರ್ ಮಹಮ್ಮದ್ ಅಬ್ಬಾಸ್ ಸ್ಟಾನಿಕ್ಜಾ ಈಗ ತಾಲಿಬಾನ್ ವಿದೇಶಾಂಗ ವ್ಯವಹಾರಗಳ ಸಚಿವ.
1996ರಲ್ಲಿ ಇಂಗ್ಲೀಷ್ ಭಾಷೆಯ ಮೇಲಿನ ಹಿಡಿತ ಮತ್ತು ಯೋಧ ಶಕ್ತಿಯನ್ನು ಅವಲಂಬಿಸಿ ಈತನನ್ನು ಆಗಿನ ತಾಲಿಬಾನ್, ಅಮೆರಿಕದ ಜತೆಗೆ ಸಂಧಾನ ಸೂತ್ರಧಾರನಾಗಿ ನೇಮಕ ಮಾಡಿತ್ತು. ಈಗ ಮತ್ತೆ ತಾಲಿಬಾನ್ ಅಧಿಕಾರದ ಸೂತ್ರ ಹಿಡಿಯುತ್ದಿದ್ದು, ಭಾರತ ಮತ್ತು ಪಾಕಿಸ್ತಾನ ತಮ್ಮೊಳಗಿನ ಭಿನ್ನಾಭಿಪ್ರಾಯ ಮರೆತು ಕೆಲಸ ಮಾಡಬೇಕಾಗಿದೆ ಎಂದು ಹೇಳಿದ್ದಾನೆ.
ಅಫ್ಘಾನಿಸ್ತಾನದ ಪುನರ್ ವಸತಿಯ ಕಾರ್ಯದಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಬೇಕು. ಜತೆಗೆ ಉಭಯ ದೇಶಗಳ ನಡುವೆ ಸಾಂಸ್ಕೃತಿಕ ಮತ್ತು ಆರ್ಥಿಕ ಸಂಬಂಧಗಳು ಮುಂದುವರಿಯಬೇಕು ಎಂದಿದ್ದಾನೆ.
ಪಾಕಿಸ್ತಾನದ ಜತೆಗೆ ಭಾರತ ಉತ್ತಮ ಸಂಬಂಧ ಹೊಂದಿರಬೇಕು. ಈ ನಿಟ್ಟಿನಲ್ಲಿ ಉಭಯ ದೇಶಗಳು ತಮ್ಮೊಳಗಿನ ದ್ವಿಪಕ್ಷೀಯ ವಿಷಯಗಳನ್ನು ಪರಿಹರಿಸಿಕೊಳ್ಳಬೇಕು. ಅದಕ್ಕೂ ತಾಲಿಬಾನಿಗಳಿಗೂ ಸಂಬಂಧವಿಲ್ಲ. ಗಡಿ ಸಮಸ್ಯೆಯನ್ನು ಉಭಯ ದೇಶಗಳೇ ಬಗೆಹರಿಸಿಕೊಳ್ಳಬೇಕು ವಿನಃ ಇದರಲ್ಲಿ ಅಫ್ಘಾನ್ ಹಸ್ತಕ್ಷೇಪವನ್ನು ಅಪೇಕ್ಷಿಸಬಾರದು ಎಂದು ಹೇಳುವ ಮೂಲಕ ಜಾಣತನ ಮೆರೆದಿದ್ದಾನೆ.
ಹಾಗೆಂದು ಈತ ಭಾರತಕ್ಕೆ ಹೊಸಬೇನೂ ಅಲ್ಲ. 1982ರಲ್ಲಿ ಡೆಹ್ರಾಡೂನ್ ನಲ್ಲಿರುವ ಮಿಲಿಟರಿ ಅಕಾಡೆಮಿಯಲ್ಲಿ ಸೈನಿಕ ತರಬೇತಿಗಾಗಿ ಸೇರಿದ್ದ. ಆಗ ಆತನ ವಯಸ್ಸು 20 ವರ್ಷಗಳಾಗಿತ್ತು ಎಂದು. ಅವನನ್ನು ಎಲ್ಲರೂ ಶೇರು ಎಂದೇ ಕರೆಯುತ್ತಿದ್ದರು. ಅದಕ್ಕೆ ಕಾರಣವೆಂದರೆ ಅತನ ಸದೃಢ ಮೈಕಟ್ಟು. ದಿನಕ್ಕೆ ಒಂದು ಗಂಟೆಗೂ ಅಧಿಕ ಕಾಲ ಈಜು ಕಲಿಯುತ್ತಿದ್ದ. ಆಗ ಆತನಲ್ಲಿ ಧಾರ್ಮಿಕ ಅಂಧಾಚರಣೆ ಏನೂ ಕಾಣುತ್ತಿರಲಿಲ್ಲ. ಹೀಗಾಗಿ ಆತನನ್ನು ಶೇರು ಅಥವಾ ಶೇರ್ ಎಂದೇ ಎಲ್ಲರೂ ಕ್ಯಾಂಪಸ್ ನಲ್ಲಿ ಕರೆಯುತ್ತಿದ್ದರು. ಒಮ್ಮೆ ವಾರಣಾಸಿಗೆ ಸಹದ್ಯೋಗಿಗಳ ಜತೆ ಹೋಗಿ ಗಂಗಾ ಸ್ನಾನ ಕೂಡ ಮಾಡಿದ್ದ ಎಂದು ಅಕಾಡೆಮಿಯಲ್ಲಿ ಕೆಲಸ ಮಾಡಿ ಈಗ ನಿವೃತ್ತರಾಗಿರುವ ಮೇಜರ್ ಜನರಲ್ ಡಿ.ಎ. ಚತುರ್ವೇದಿ ನೆನಪಿಸಿಕೊಳ್ಳುತ್ತಾರೆ.
ತರಬೇತಿ ಮುಗಿದ ಬಳಿಕ ಆತ ಅಫ್ಘಾನ್ ಸೇನೆಯನ್ನು ಸೇರಿದ. ಸೋವಿಯತ್-ಅಫ್ಘಾನ್ ಯುದ್ಧದಲ್ಲಿ ಸಕ್ರಿಯ ಪಾತ್ರ ವಹಿಸಿದ್ದ. ಲೆಫ್ಟಿನೆಂಟ್ ಪದವಿಯನ್ನು ಪಡೆದ ಎಂದವರು ಹೇಳಿದರು. ಹಾಗೆಂದು ಅಫ್ಘಾನ್ ಸೈನಿಕರಿಗೆ ತರಬೇತಿ ನೀಡುವುದು ಹೊಸದೇನೂ ಅಲ್ಲ. 1950 ಅಂತ್ಯ ಭಾಗದಲ್ಲಿ ನಡೆದ ಒಪ್ಪಂದದ ಪ್ರಕಾರ ಆಯ್ದ ಸೈನಿಕರಿಗೆ ಭಾರತದಲ್ಲಿ ತರಬೇತಿ ನೀಡುತ್ತಿತ್ತು. ಆದರೆ ಅವರು ಯಾರೂ ಮತಾಂಧರಾಗಿ ಬದಲಾದ ನಿದರ್ಶನಗಳಿಲ್ಲ. ಅದಾಗ್ಯೂ 2001ರ ಬಳಿಕ ಅಫ್ಘಾನ್ ದೇಶವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಡೆಹ್ರಾಡೂನ್, ಚೆನ್ನೈ ಸೇರಿದಂತೆ ಹಲವೆಡೆ ಅತ್ಯಾಧುನಿಕ ಶಸ್ತ್ರಾಸ್ತ್ರ ತರಬೇತಿ ಪಡೆದಿದ್ದಾರೆ. ಅವರ ಸಂಖ್ಯೆ 12 ಸಾವಿರಕ್ಕೂ ಹೆಚ್ಚು ಎನ್ನುವುದೇ ಈಗ ಭಾರತಕ್ಕೆ ಇರುವ ಕಳವಳ.




