ಗ್ಯಾಂಗ್ ರೇಪ್ ಆರೋಪಿಗಳನ್ನ ಕೂಡಲೇ ಬಂಧಿಸುತ್ತೇವೆ: ಗೃಹ ಸಚಿವ ಅರಗ ಜ್ಞಾನೇಂದ್ರ

ಮೈಸೂರು: ಪ್ರಕರಣ ನಡೆಯಬಾರದಿತ್ತು. ನಡೆದು ಹೋಗಿದೆ. ಇದು ಅತ್ಯಂತ ಸೂಕ್ಷ್ಮ ಪ್ರಕರಣವಾಗಿದ್ದರಿಂದ ಹೇಳಲು ಆಗಲ್ಲ. ಘಟನೆಯನ್ನ ಗಂಭೀರವಾಗಿ ಪರಿಗಣಿಸಿದ್ದೇವೆ. ಗ್ಯಾಂಗ್ ರೇಪ್ ಆರೋಪಿಗಳನ್ನ ಕೂಡಲೇ ಬಂಧಿಸುತ್ತೇವೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.
ಮೈಸೂರಿನಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಹಾಗೂ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಮಾಹಿತಿ ನೀಡಿದರು. ಆರೋಪಿಗಳನ್ನ ಹಿಡಿಯಲು ಹೆಚ್ಚಿನ ಸಮಯ ಬೇಕಾಗಿದೆ ಎಂದರು.
ಇದನ್ನೂ ಓದಿ: ನಿರ್ಭಯಾ ಅತ್ಯಾಚಾರಿಗಳಿಗೆ ನೀಡಿದ ಶಿಕ್ಷೆಯನ್ನೇ ಮೈಸೂರು ಅತ್ಯಾಚಾರಿಗಳಿಗೆ ನೀಡಿ: ಇಂದ್ರಜಿತ್ ಲಂಕೇಶ್ ಒತ್ತಾಯ
ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಮಾತನಾಡಿ, ಅತ್ಯಾಚಾರ ಪ್ರಕರಣದ ಸಂತ್ರಸ್ತ ಯುವತಿ ಹೇಳಲಿ ಬಿಡಲಿ, ಪ್ರಕರಣದ ತನಿಖೆ ನಡೀತಿದೆ. ಆರೋಪಿಗಳು ಪತ್ತೆಯಾದ ತಕ್ಷಣ ಹೇಳ್ತೀವಿ. ಯಾರ ಮೇಲೆ ದೌರ್ಜನ್ಯ ನಡೆದರೂ ಅವರು ಸುಧಾರಿಸಿಕೊಳ್ಳಬೇಕು. ಸುಧಾರಿಸಿಕೊಂಡ ನಂತರ ಹೇಳಿಕೆ ಪಡೆಯಲಾಗುತ್ತದೆ. ಭದ್ರತೆ ದೃಷ್ಠಿಯಿಂದ ಎಲ್ಲಾ ವಿಚಾರ ಬಹಿರಂಗ ಗೊಳಿಸಲು ಆಗಲ್ಲ. ಮಾಹಿತಿ ಸೋರಿಕೆಯಾದರೆ ಆರೋಪಿಗಳು ಎಚ್ಚೆತ್ತುಕೊಳ್ಳಬಹುದು. ಆರೋಪಿಗಳ ಬಂಧನ ತಡವಾಗಬಹುದು ಎಂದು ತಿಳಿಸಿದರು.
ಇನ್ನು ಪ್ರಕರಣದ ತನಿಖೆ ಸಂಬಂಧ ಸಂತ್ರಸ್ತೆಯ ಪೋಷಕರು ಸಹಕರಿಸುತ್ತಿಲ್ಲ ಎಂಬ ವಾದವನ್ನು ತಳ್ಳಿ ಹಾಕಿದ ಅವರು, ಯಾವ ತಂದೆ-ತಾಯಿ ಇಂತಹ ಸಂದರ್ಭದಲ್ಲಿ ಉತ್ತರಿಸ್ತಾರೆ. ಅವರು ಸ್ವಲ್ಪ ದಿನದ ಬಳಿಕ ಮಾತನಾಡೋದಾಗಿ ತಿಳಿಸಿದ್ದಾರೆ ಎಂದರು.
