75th Independence Day: ಎಲ್ಲಾ ಸೈನಿಕ ಶಾಲೆಯಲ್ಲಿ ಹೆಣ್ಣು ಮಕ್ಕಳಿಗೂ ಪ್ರವೇಶ: ಪ್ರಧಾನಿ ಮೋದಿ ಘೋಷಣೆ

ನವದೆಹಲಿ: ನನಗೆ ಅನೇಕ ಹೆಣ್ಣುಮಕ್ಕಳು ಪತ್ರ ಬರೆದು, ಸೈನಿಕ ಶಾಲೆಗಳಲ್ಲಿ ನಮಗೂ ಅವಕಾಶ ಕೊಡಬೇಕು ಎಂದು ಮನವಿ ಮಾಡಿದ್ದರು. ಅದರಂತೆ ದೇಶದ ಎಲ್ಲಾ ಸೈನಿಕ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೂ ಪ್ರವೇಶ ನೀಡಲಾವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.
ದೆಹಲಿಯ ಕೆಂಪುಕೋಟೆಯಲ್ಲಿ 75 ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣದ ಬಳಿಕ ಮಾತನಾಡಿದ ಅವರು, ಸದ್ಯ ದೇಶದ ಕೆಲವೇ ಸೈನಿಕ ಶಾಲೆಗಳಲ್ಲಿ ಬಾಲಕಿಯರಿಗೂ ಪ್ರವೇಶಕ್ಕೆ ಅವಕಾಶ ಇದೆ. ಇನ್ನುಳಿದಂತೆ ಗಂಡುಮಕ್ಕಳಿಗೆ ಮಾತ್ರ ಅಲ್ಲಿ ಕಲಿಕೆ ಇರುತ್ತದೆ. ಅದರ ಅನ್ವಯ ಯಾವುದೇ ಸೈನಿಕ ಶಾಲೆಗಳಿಗೆ ಹೆಣ್ಣುಮಕ್ಕಳೂ ಪ್ರವೇಶ ಪಡೆಯಬಹುದಾಗಿದೆ ಎಂದರು.
ಕೊರೊನಾ ವಿರುದ್ಧ ಹೋರಾಡಿದ ಕೊರೊನಾ ವಾರಿಯರ್ಸ್ ಗೌರವ ವಂದನೆ ಸಲ್ಲಿಸಬೇಕಿದೆ. ದೇಶದ ಕೆಲವೆಡೆ ಪ್ರವಾಹ ಪರಿಸ್ಥಿತಿ ಇದೆ. ಕೇಂದ್ರ, ರಾಜ್ಯ ಸರ್ಕಾರಗಳು ದೇಶದ ಜನತೆಯ ಜೊತೆಗಿವೆ. ಒಲಿಂಪಿಕ್ಸ್ ಭಾಗಿಯಾಗಿದ್ದ ಕ್ರೀಡಾಪುಗಳು ನಮ್ಮ ಜೊತೆಗಿದ್ದಾರೆ. ಈ ಎಲ್ಲಾ ಕ್ರೀಡಾಪಟುಗಳಿಗೆ ಗೌರವ ಕೊಡುವುದು ನಮ್ಮ ಆದ್ಯತೆ ಆಗಿದೆ. ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಚಪ್ಪಾಳೆ ಹೊಡೆದು ಸನ್ಮಾನಿಸಿ ಎಂದು ದೇಶದ ಜನತೆಗೆ ಕರೆ ಕೊಟ್ಟರು.
ನಿನ್ನೆ ದೇಶ ಭಾವುಕ ನಿರ್ಣಯವನ್ನು ಕೈಗೊಂಡಿದೆ. ದೇಶ ವಿಭಜನೆಯ ಹಿಂದಿನ ನೆನಪಿನ ಕರಾಳ ದಿನಾಚರಣೆ ಆಚರಿಸಲು ನಿನ್ನೆ ತೀರ್ಮಾನ ಕೈಗೊಳ್ಳಲಾಗಿದೆ. ದೇಶ ವಿಭಜನೆ ಸಂದರ್ಭದಲ್ಲಿ ನಡೆದ ಹಿಂಸಾಚರನ್ನ ನೆನೆಯಬೇಕಿದೆ ಎಂದು ಹೇಳಿದರು.
ಭಾರತದ ಮೊದಲ ಪ್ರಧಾನಿ ನೆಹರೂ, ದೇಶವನ್ನು ಏಕೀಕೃತ ರಾಷ್ಟ್ರವನ್ನಾಗಿ ಮಾಡಿದ ಸರ್ದಾರ್ ವಲ್ಲಭಬಾಯಿ ಪಟೇಲ್, ಭಾರತಕ್ಕೆ ಭವಿಷ್ಯದ ಹಾದಿಯನ್ನು ತೋರಿಸಿದ ಬಾಬಾಸಾಹೇಬ್ ಅಂಬೇಡ್ಕರ್ ದೇಶವು ಇಂತಹ ಪ್ರತಿಯೊಬ್ಬರನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ನೆನಪಿಸಿಕೊಳ್ಳುತ್ತದೆ ಎಂದರು.
