Karnataka SSLC Result: ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ
ಬೆಂಗಳೂರು: ರಾಜ್ಯದ ಇತಿಹಾಸದಲ್ಲಿಯೇ ವಿನೂತನವಾಗಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ (SSLC Result) ಇಂದು ಪ್ರಕಟವಾಗಿದೆ. ಕಳೆದ ಮೂರು ವಾರಗಳ ಹಿಂದೆ ನಡೆದ ಸರಳ ಮಾದರಿಯ ಪರೀಕ್ಷೆ ಫಲಿತಾಂಶವನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕೋವಿಡ್ ಸವಾಲಿನ ಸಮಯದಲ್ಲಿ ಪರೀಕ್ಷೆ ಬರೆದ ಎಲ್ಲರನ್ನೂ ಪಾಸ್ ಮಾಡುವುದಾಗಿ ಮೊದಲೇ ಹೇಳಲಾಗಿತ್ತು. ಅದರಂತೆ, ಒಬ್ಬ ವಿದ್ಯಾರ್ಥಿಯನ್ನು ಹೊರತು ಪಡಿಸಿ ಎಲ್ಲರನ್ನೂ ಉತ್ತೀರ್ಣ ಮಾಡಲಾಗಿದೆ. ಶೇ. 99.9ಫಲಿತಾಂಶ ಬಂದಿದೆ. ತಾನು ಪರೀಕ್ಷೆ ಬರೆಯುವ ಬದಲು ಬೇರೆಯುವರು ಪರೀಕ್ಷೆ ಬರೆದ ಕಾರಣ ಒಬ್ಬ ವಿದ್ಯಾರ್ಥಿಯನ್ನು ಅನುತ್ತೀರ್ಣ ಮಾಡಲಾಗಿದೆ ಎಂದರು.
8 ಲಕ್ಷಕ್ಕೂ ಹೆಚ್ಚು ಮಕ್ಕಳು ಪರೀಕ್ಷೆ ಬರೆದಿದ್ದರು. ಈ ಬಾರಿ ಡಿಜಿಟಲ್ ಮೌಲ್ಯಮಾಪನ ಮಾಡಲಾಗಿತ್ತು. ಗ್ರೇಡ್ಗಳ ಪ್ರಕಾರ ಫಲಿತಾಂಶ ಪ್ರಕಟಿಸಲಾಗಿದೆ. ಫಲಿತಾಂಶದಲ್ಲಿ ಬೆಂಗಳೂರು ಉತ್ತರ ಪ್ರಥಮ, ಬೆಂಗಳೂರು ದಕ್ಷಿಣ ದ್ವಿತೀಯ ಹಾಗೂ ರಾಮನಗರ ತೃತೀಯ ಸ್ಥಾನದಲ್ಲಿದೆ. ಬಳ್ಳಾರಿ ಜಿಲ್ಲೆಗೆ ಫಲಿತಾಂಶದಲ್ಲಿ ಕೊನೆ ಸ್ಥಾನ ಬಂದಿದೆ.
ಎ+ ಗ್ರೇಡ್ – 128931 ವಿದ್ಯಾರ್ಥಿಗಳು ಉತ್ತೀರ್ಣ
ಎ ಗ್ರೇಡ್ – 250317 ವಿದ್ಯಾರ್ಥಿಗಳು ಉತ್ತೀರ್ಣ
ಬಿ ಗ್ರೇಡ್ – 287694 ವಿದ್ಯಾರ್ಥಿಗಳು ಉತ್ತೀರ್ಣ
ಸಿ ಗ್ರೇಡ್ – 113610 ವಿದ್ಯಾರ್ಥಿಗಳು ಉತ್ತೀರ್ಣ
ಭಾಷಾವಾರು ಫಲಿತಾಂಶದ ವಿವರ
ಎಸ್ ಎಸ್ ಎಲ್ ಸಿ ಪರೀಕ್ಷೆಯ ಪ್ರಥಮ ಭಾಷೆಯಲ್ಲಿ 125ಕ್ಕೆ 125 ಅಂಕಗಳನ್ನು 25,702 ವಿದ್ಯಾರ್ಥಿಗಳು ಪಡೆದಿದ್ದಾರೆ. ದ್ವಿತೀಯ ಭಾಷೆಯಲ್ಲಿ 100 ನೂರು ಅಂಕಗಳನ್ನು 36,628 ವಿದ್ಯಾರ್ಥಿಗಳು ಪಡೆದಿದ್ದಾರೆ. ತೃತೀಯ ಭಾಷೆಯಲ್ಲಿ 100ಕ್ಕೆ ನೂರು ಅಂಕಗಳನ್ನು 36,776 ವಿದ್ಯಾರ್ಥಿಗಳು ಪಡೆದಿದ್ದಾರೆ. ಗಣಿತ ಭಾಷೆಯಲ್ಲಿ 100ಕ್ಕೆ ನೂರು ಅಂಕಗಳನ್ನು 6,321 ವಿದ್ಯಾರ್ಥಿಗಳು ಪಡೆದಿದ್ದಾರೆ. ವಿಜ್ಞಾನ ವಿಷಯದಲ್ಲಿ 100ಕ್ಕೆ ನೂರು ಅಂಕವನ್ನು 3,640 ವಿದ್ಯಾರ್ಥಿಗಳು ಪಡೆದಿದ್ದಾರೆ. ಸಮಾಜ ವಿಜ್ಞಾನ ವಿಷಯದಲ್ಲಿ 100ಕ್ಕೆ ನೂರು ಅಂಕಗಳನ್ನು 9,367 ವಿದ್ಯಾರ್ಥಿಗಳು ಪಡೆದಿರೋದಾಗಿ ತಿಳಿಸಿದರು.
sslc.Karnataka.gov.inನಲ್ಲಿ ಫಲಿತಾಂಶ ಲಭ್ಯವಿದೆ. ನೊಂದಣಿಯಾದ ಮೊಬೈಲ್ ಸಂಖ್ಯೆಗೂ ಸಂದೇಶದ ಮೂಲಕ ರಿಸಲ್ಟ್ ಕಳಿಸುವ ವ್ಯವಸ್ಥೆಯಾಗಿದೆ ಎಂದು ಸಚಿವರು ತಿಳಿಸಿದರು.
