ಉತ್ತರ ಕನ್ನಡಜಿಲ್ಲಾ ಸುದ್ದಿರಾಜಕೀಯ

Shivaram Hebbar: ಎಪಿಎಂಸಿಯಿಂದ ಸಚಿವ ಸ್ಥಾನದತ್ತ ಶಿವರಾಮ ಹೆಬ್ಬಾರ್ ಹೆಜ್ಜೆ

ಕಾರವಾರ : ರಾಜ್ಯದಲ್ಲಿ ಸಚಿವ ಸಂಪುಟ ರಚನೆಯ ಕಸರತ್ತು ಕೊನೆಗೂ ಅಂತಿಮ ಹಂತಕ್ಕೆ ಬಂದು ತಲುಪಿದೆ. ಇಂದು ಮಧ್ಯಾಹ್ನ 2.30 ಕ್ಕೆ ನೂತನ ಸಚಿವರುಗಳು ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಒಟ್ಟು 29 ಶಾಸಕರುಗಳಿಗೆ ಮೊದಲ ಹಂತದಲ್ಲಿ ಸಚಿವರಾಗಲು ಹೈಕಮಾಂಡ್ ಅನುಮತಿ ನೀಡಿದೆ.

ಇನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಸಚಿವರಾಗಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದ ವೇಳೆ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದು ಸಚಿವರಾಗಿದ್ದರು. ಈಗ ಮತ್ತೊಮ್ಮೆ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.

ಯಡಿಯೂರಪ್ಪ ಸಂಪುಟದಲ್ಲಿ ಕಾರ್ಮಿಕ ಸಚಿವರಾಗಿದ್ದ ವೇಳೆ ರಾಜ್ಯಾದ್ಯಂತ ತಿರುಗಾಟ ನಡೆಸಿ, ಉತ್ತಮವಾಗಿ ಕೆಲಸವನ್ನು ನಿರ್ವಹಿಸುವ ಜೊತೆಗೆ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಒಳ್ಳೆಯ ಕೆಲಸ ಮಾಡಿದ್ದರಿಂದ ಹೆಬ್ಬಾರ್‌ರಿಗೆ ಸಚಿವ ಸ್ಥಾನ ಸಿಕ್ಕಿದೆ. ಈ ಬಗ್ಗೆ ಖುದ್ದು ಹೆಬ್ಬಾರ್ ಕೂಡ ಅಭಿಪ್ರಾಯ ವ್ಯಕ್ತಪಡಿಸಿ, ಸಂತಸ ಹಂಚಿಕೊಂಡಿದ್ದಾರೆ.

ವ್ಯಕ್ತಿ ಪರಿಚಯ

ನೂತನ ಸಚಿವ ಶಿವರಾಮ ಹೆಬ್ಬಾರ್ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಗ್ರಾಮದಲ್ಲಿ ಜೂನ್ 4,1957 ರಲ್ಲಿ ಜನಿಸಿದರು.

ರಾಜಕೀಯ ರಂಗದಲ್ಲಿನ ಪ್ರಮುಖ ಘಟ್ಟಗಳು

• 1983 ರಲ್ಲಿ ಪ್ರಥಮವಾಗಿ ಯಲ್ಲಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಆಯ್ಕೆ.
• ಯಲ್ಲಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಕೆ.
• ಉತ್ತರಕನ್ನಡ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಕೆ.
• 2013 ರಲ್ಲಿ ಪ್ರಥಮವಾಗಿ ಯಲ್ಲಾಪುರ ವಿಧಾನಸಭಾ ಮತ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ.
• 2018 ರಲ್ಲಿ ಪುನಃ ಶಾಸಕರಾಗಿ ವಿಧಾನಸಭೆಗೆ ಮರು ಆಯ್ಕೆ
• ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಕೆ.
• 2019 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಮೂರನೇ ಬಾರಿಗೆ ಶಾಸಕರಾಗಿ ವಿಧಾನಸಭೆಗೆ ಬಹುಮತದಿಂದ ಆಯ್ಕೆ.
• 6 ನೇ ಫೆಬ್ರವರಿ 2020 ರಲ್ಲಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಹಾಗೂ ಕಾರ್ಮಿಕ ಹಾಗೂ ಸಕ್ಕರೆ ಸಚಿವರಾಗಿ ಕಾರ್ಯ ನಿರ್ವಹಣೆ.
• ಕೃಷಿ ಮತ್ತು ಸಹಕಾರ ಕ್ಷೇತ್ರದಲ್ಲಿ ಅಪಾರ ಅನುಭವವನ್ನು ಹೊಂದಿದ್ದಾರೆ.
• ಕರ್ನಾಟಕ ರಾಜ್ಯ ಸಹಕಾರಿ (ಅಪೆಕ್ಸ್) ಬ್ಯಾಂಕ್‌ನ ನಿರ್ದೇಶಕರಾಗಿ ನಿರ್ವಹಣೆ.
• ಪ್ರಸ್ತುತ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್ (ಕೆಡಿಸಿಸಿ), ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ.
• ಶಿವರಾಮ ಹೆಬ್ಬಾರ್ ರಾಜಕೀಯ ಕ್ಷೇತ್ರವಲ್ಲದೇ ಉದ್ಯಮ ಕ್ಷೇತ್ರದಲ್ಲಿಯೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು,ಯಶಸ್ವಿ ಉದ್ಯಮಿಯಾಗಿದ್ದಾರೆ. ಈ ಮೂಲಕ ಹಲವಾರು ಜನರಿಗೆ ಉದ್ಯೋಗವನ್ನು ಕಲ್ಪಿಸಿದ್ದಾರೆ.

ಹರ್ಷ ವ್ಯಕ್ತಪಡಿಸಿದ ನೂತನ ಸಚಿವ ಶಿವರಾಮ್​ ಹೆಬ್ಬಾರ್​

“ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಬಸವರಾಜ ಬೊಮ್ಮಾಯಿ ಅವರು ದೂರವಾಣಿ ಮೂಲಕ ಕರೆ ಮಾಡಿ ನನಗೆ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಆಹ್ವಾನಿಸಿರುವುದನ್ನು ನಿಮ್ಮ ಮುಂದೆ ಹಂಚಿಕೊಳ್ಳುವುದಕ್ಕೆ ಅತ್ಯಂತ ಸಂತಸವಾಗುತ್ತಿದೆ.”

ಕಳೆದ 1 ವರ್ಷ 5 ತಿಂಗಳುಗಳ ಕಾಲ ರಾಜ್ಯದ ಕಾರ್ಮಿಕ ಖಾತೆ ಸಚಿವನಾಗಿ ಪಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕೊಟ್ಟ ಜವಾಬ್ದಾರಿಯನ್ನು ಶ್ರದ್ಧೆಯಿಂದ ನಿರ್ವಹಿಸಿ, ರಾಜ್ಯಾದ್ಯಂತ ಪ್ರವಾಸ ಮಾಡಿ ಶ್ರಮಿಕ ವರ್ಗಗಳ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆಗಾಗಿ ಹಲವಾರು ಮಹತ್ವದ ಯೋಜನೆಗಳನ್ನು ಜಾರಿಗೆ ತರಲಾಗಿದೆ.ನನಗೆ ನೀಡಿದ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದ್ದೇನೆ ಮುಂದೆಯೂ ಸಹ ಕ್ಷೇತ್ರದ, ರಾಜ್ಯದ ಜನತೆಗೆ ಯಾವುದೇ ಚ್ಯುತಿ ಬರದಂತೆ ಕಾರ್ಯ ನಿರ್ವಹಿಸುತ್ತೇನೆ.

ನನಗೆ ಮತ್ತೊಮ್ಮೆ ಸಚಿವ ಸ್ಥಾನ ಲಭಿಸಲು ಮೂಲ ಕಾರಣೀಕರ್ತರಾದ ಯಲ್ಲಾಪುರ – ಮುಂಡಗೋಡ ವಿಧಾನಸಭಾ ಕ್ಷೇತ್ರದ ಮಹಾ ಜನತೆಗೆ,ನನ್ನ ಮೇಲೆ ನಂಬಿಕೆ ಇಟ್ಟು ಮತ್ತೊಮ್ಮೆ ರಾಜ್ಯದ ಜನತೆಯ ಸೇವೆ ಮಾಡುವುದಕ್ಕೆ ಅವಕಾಶ ಕಲ್ಪಿಸಿದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ, ರಾಜ್ಯ ಮತ್ತು ಕೇಂದ್ರದ ಎಲ್ಲಾ ನಾಯಕರಿಗೂ ನನ್ನ ಹತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button